10 ವರ್ಷದ ಸೇಡು ತೀರಿಸಿದ ಮಗ – ತಾಯಿಗೆ ಅವಮಾನ ಮಾಡಿದ ವ್ಯಕ್ತಿಯ ಕೊಲೆ

ಲಕ್ನೋ: ಹತ್ತು ವರ್ಷಗಳ ಹಿಂದೆ ತಾಯಿಗೆ ಮಾಡಿದ ಅವಮಾನಕ್ಕೆ ಮಗನೊಬ್ಬ ಆ ವ್ಯಕ್ತಿಯ ಕೊಲೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ. ಇದೊಂದು ಬಾಲಿವುಡ್ನ ಚಿತ್ರಕಥೆಯಂತೆ ತೋರುತ್ತದೆ. ಆದರೆ ಇದು ಸತ್ಯ ಘಟನೆ. ಪ್ರತೀಕಾರದ ದಾಹದಿಂದ ಸೋನು ಕಶ್ಯಪ್ ಮನೋಜ್ ಎಂಬಾತನನ್ನು ಹತ್ಯೆಗೈದಿದ್ದಾನೆ.

ಸೋನು ಕಶ್ಯಪ್, ಮನೋಜ್‌ನನ್ನು ಹುಡುಕುತ್ತಾ ಮುಂದಿನ 10 ವರ್ಷಗಳ ಕಾಲ ಲಕ್ನೋದ ಬೀದಿಗಳಲ್ಲಿ ಓಡಾಡಿದ್ದ. ಸೋನು ಸ್ನೇಹಿತರು ಈ ಕೊಲೆಯಲ್ಲಿ ಸಹಾಯ ಮಾಡಿದ್ದಾರೆ. ಕೊಲೆಯ ನಂತರ ಪಾರ್ಟಿ ಮಾಡುವ ಆಮಿಷವೊಡ್ಡಿ ಸಹಾಯ ಪಡೆದಿದ್ದ. ಎಲ್ಲವನ್ನೂ ಪ್ರಿ ಪ್ಲ್ಯಾನ್ ಆಗಿ ಮಾಡಿದ್ದ. ಆದರೆ ಆತನೇ ಕೊಲೆ ಮಾಡಿದ್ದು ಎಂದು ತಿಳಿಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಒಂದು ಪಾಸ್ಟ್ನಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಗಳನ್ನು ಸೋನು, ರಂಜೀತ್, ಆದಿಲ್, ಸಲಾಮು ಹಾಗೂ ರೆಹಮತ್ ಅಲಿ ಎಂದು ಗುರುತಿಸಲಾಗಿದೆ.ಸುಮಾರು 10 ವರ್ಷಗಳ ಹಿಂದೆ ನಡೆದ ಜಗಳವೊಂದರಲ್ಲಿ ಮನೋಜ್ ಸೋನುವಿನ ತಾಯಿಯನ್ನು ಥಳಿಸಿ ಅಲ್ಲಿಂದ ಪರಾರಿಯಾಗಿದ್ದ.
ತನ್ನ ತಾಯಿಗೆ ಆದ ಅವಮಾನದಿಂದ ಅಸಮಾಧಾನಗೊಂಡು ಕೋಪಗೊಂಡ ಸೋನು ಅವನನ್ನು ಹುಡುಕಲು ಹೊರಟಿದ್ದ, ಆದರೆ ಎಷ್ಟೇ ಹುಡುಕಿದರೂ ಮನೋಜ್ ಸುಳಿವು ಪತ್ತೆಯಾಗಿರಲಿಲ್ಲ.ಆದರೆ ಪ್ರಯತ್ನ ಬಿಟ್ಟಿರಲಿಲ್ಲ. ಸುಮಾರು ಮೂರು ತಿಂಗಳ ಹಿಂದೆ. ಮನೋಜ್ ಕೊನೆಗೂ ನಗರದ ಮುನ್ಶಿ ಪುಲಿಯಾ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ. ಅಲ್ಲಿಂದ ಮತ್ತೆ ಸೇಡು ಹೆಚ್ಚಾಗಿತ್ತು.
ಮನೋಜ್ ನಿತ್ಯ ಏನು ಮಾಡುತ್ತಾನೆ, ಎಲ್ಲಿಗೆ ಹೋಗುತ್ತಾನೆ , ದಿನಚರಿಯನ್ನು ಗಮನಿಸಿದ್ದ, ಅವನನ್ನು ಕೊಲ್ಲಲು ಯೋಜನೆ ರೂಪಿಸಿದ್ದ. ಕೊಲೆಯ ಸಂಚಿನಲ್ಲಿ ಸ್ನೇಹಿತರನ್ನೂ ಸೇರಿಸಿಕೊಂಡಿದ್ದ. ಮೇ 22 ರಂದು, ಮನೋಜ್ ತನ್ನ ಅಂಗಡಿಯನ್ನು ಮುಚ್ಚಿ ಒಂಟಿಯಾಗಿ ಹೊರಟ ನಂತರ, ಅವನ ಮೇಲೆ ಕಬ್ಬಿಣದ ರಾಡ್‌ಗಳಿಂದ ದಾಳಿ ಮಾಡಿದ್ದರು.ಚಿಕಿತ್ಸೆಯ ಸಮಯದಲ್ಲಿ ಮನೋಜ್ ಸಾವನ್ನಪ್ಪಿದ್ದ. ಆರೋಪಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ, ಸಿಕ್ಕಿರಲಿಲ್ಲ.
ಕೊಲೆಯ ನಂತರ ಸೋನು ಹಾಗೂ ಇತರೆ ಸ್ನೇಹಿತರು ಪಾರ್ಟಿ ಮಾಡಿದ್ದರು. ಕೆಲವು ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆ ಫೋಟೊ ಶಂಕಿತರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಕೊಲೆಯ ಸಮಯದಲ್ಲಿ ಅವನು ಧರಿಸಿದ್ದ ಕಿತ್ತಳೆ ಬಣ್ಣದ ಟೀ ಶರ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಧರಿಸಿರುವುದು ಕಂಡುಬಂದಿದೆ.
