ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿ: ಮಂಗಳೂರಿನಲ್ಲಿ ಘಟನೆ

ಮಂಗಳೂರು: ರಥಬೀದಿ ಬಳಿಯ ನ್ಯೂ ಫೀಲ್ಡ್ ಸ್ಟ್ರೀಟ್‌ನಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಸುಮಾರು 11.5 ಪವನ್ ತೂಕದ 7.50 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಅಪರಿಚಿತ ವ್ಯಕ್ತಿಯೊಬ್ಬ ಕಸಿದು ಪರಾರಿಯಾಗಿದ್ದಾನೆ.

ದೂರುದಾರರಾದ ಅಮೃತಕಲಾ ಪೈ ಅವರು ಆ. 9ರಂದು ರಾತ್ರಿ ಅಂಗಡಿ ಹೋಗಿ ತರಕಾರಿ ತೆಗೆದುಕೊಂಡು ಬಂದು ನ್ಯೂ ಫೀಲ್ಡ್ ಸ್ಟ್ರೀಟ್‌ನ ಅಂಬಾಸದನ ಮನೆಯ ಎದುರಿನ ಬಾಗಿಲನ್ನು ತೆರೆಯುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಕುತ್ತಿಗೆಗೆ ಕೈ ಹಾಕಿ ಹವಳದ ಸರ, ಕರಿಮಣಿ ಸರ ಮತ್ತು ಚಿನ್ನದ ನೆಕ್ಲೆಸನ್ನು ಎಳೆದಿದ್ದಾನೆ.
ತತ್‌ಕ್ಷಣ ಜಾಗೃತರಾದ ಅಮೃತಕಲಾ ಅವರು ಆಭರಣಗಳನ್ನು ಕೈಯಲ್ಲಿ ಹಿಡಿದುಕೊಂಡರು. ಇದರಿಂದಾಗಿ ಹವಳದ ಸರ, ಕರಿಮಣಿ ಸರದ ಒಂದು ತುಂಡು ಮತ್ತು ನೆಕ್ಲೆಸಿನ ಒಂದು ಭಾಗ ಮಾತ್ರ ಕಳ್ಳನ ಪಾಲಾಗಿದೆ. ಕೂಡಲೇ ಅವರು ಬೊಬ್ಬೆ ಹಾಕಿದ್ದು, ಆಗ ಆತ ರಸ್ತೆಯ ಇನ್ನೊಂದು ಬದಿಯಲ್ಲಿ ಚಾಲನ ಸ್ಥಿತಿಯಲ್ಲಿದ್ದ ಬೈಕ್‌ನಲ್ಲಿ ಹಿಂಬದಿಯಲ್ಲಿ ಕುಳಿತು ಸ್ಥಳದಿಂದ ಪರಾರಿಯಾಗಿದ್ದಾನೆ.
ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
