ಜಿಎಸ್‌ಟಿ ನೋಟಿಸ್ ವಿರೋಧಿಸಿ ಸಣ್ಣ ವ್ಯಾಪಾರಿಗಳ ಪ್ರತಿಭಟನೆ: ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ!

ಬೆಂಗಳೂರು : ಜಿಎಸ್‌ಟಿ ಮಿತಿ ಮೀರಿ ಯುಪಿಐ ಮೂಲಕ ಹಣ ಸ್ವೀಕಾರ ಮಾಡಿರುವ ಸಂಬಂಧ ತೆರಿಗೆ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದನ್ನು ಖಂಡಿಸಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಬುಧವಾರ ಸಣ್ಣ ವ್ಯಾಪಾರಿಗಳು ನಡೆಸಿದ ಪ್ರತಿಭಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಹೋರಾಟದ ಭಾಗವಾಗಿ ಹಲವೆಡೆ ಸಣ್ಣ ಪುಟ್ಟ ವರ್ತಕರು ಕೈಗೆ ಕಪ್ಪು ಪಟ್ಟಿ ಧರಿಸಿ, ಹಾಲು ಹಾಕದೆ ಚಹಾ-ಕಾಫಿ ಮಾಡಿ ಪ್ರತಿಭಟನೆ ನಡೆಸಿದರು. ಆದರೆ, ಇದರಿಂದ ಜನಜೀವನಕ್ಕೆ ಯಾವುದೇ ಸಮಸ್ಯೆಯಾಗಲಿಲ್ಲ.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಸೇರಿ ಇತರೆ ಸಂಘಟನೆಗಳು ಕರೆ ಮೇರೆಗೆ ಬೆಳಗ್ಗೆಯಿಂದ ಸಂಜೆ ಮುಖ್ಯಮಂತ್ರಿಯವರ ತೆರಿಗೆ ಮನ್ನಾ ಘೋಷಣೆ ಮಾಡುವ ಸಮಯದವರೆಗೆ ವ್ಯಾಪಾರಿಗಳ ಹೋರಾಟ ಬಹುತೇಕ ಸಾಂಕೇತಿಕವಾಗಿತ್ತು. ಬೆಂಗಳೂರಿನಲ್ಲಿ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ವಿಜಯನಗರ, ಯಶವಂತಪುರ ಸೇರಿ ಇತರೆಡೆ ಬೇಕರಿ, ಕಾಂಡಿಮೆಂಟ್ಸ್, ಟೀ ವ್ಯಾಪಾರಸ್ಥರು ಹಾಲು ಹಾಕದೆ ಬ್ಲಾಕ್ ಟೀ, ಲೇಮನ್ ಟೀ, ಗ್ರೀನ್ ಟೀ ಮಾತ್ರ ಮಾರಾಟ ಮಾಡಿದರು. ತಳ್ಳುಗಾಡಿ, ಸಣ್ಣ ವ್ಯಾಪಾರಸ್ಥರು ಕೈಗೆ ಕಪ್ಪು ಪಟ್ಟಿ ಧರಿಸಿ ತೆರಿಗೆ ವಿಧಿಸಿದ್ದನ್ನು ಖಂಡಿಸಿದರು. ಸರ್ಕಾರ ನೋಟಿಸ್ ಹಿಂಪಡೆಯಬೇಕು. ಸಣ್ಣ ವ್ಯಾಪಾರಸ್ಥರ ಮೇಲೆ ತೆರಿಗೆಯ ಭಾರ ಹೊರಿಸುವ ಧೋರಣೆ ಬಿಡಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದರು.
ವ್ಯಾಪಾರಿಗಳ ನೆರವಿಗೆ ಬಿಜೆಪಿ ಸಹಾಯವಾಣಿ: ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಣ್ಣ ವ್ಯಾಪಾರಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸಹಾಯವಾಣಿ (8884245123) ತೆರೆದಿದ್ದು, ಇದು ಸೋಮವಾರದಿಂದ(ಜು.21) ಕಾರ್ಯಾರಂಭಿಸಲಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಸಹಾಯವಾಣಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ನೋಟಿಸ್ ನೀಡಲಾಗಿದೆ. ಈ ವಿಚಾರದಲ್ಲಿ ದೊಡ್ಡ ಗೊಂದಲ ಶುರುವಾಗಿದ್ದು, ಬಡ ವ್ಯಾಪಾರಿಗಳಲ್ಲಿ ಆತಂಕದ ಛಾಯೆ ಮೂಡಿದೆ ಎಂದರು.
ರಾಜ್ಯ ಸರ್ಕಾರ ಎಲ್ಲೂ ನಿಜವಾದ ತೆರಿಗೆ ಮೊತ್ತ ಯಾವುದು ಮತ್ತು ವಿಧಿಸಲಾಗದ ತೆರಿಗೆ ಮೊತ್ತ ಯಾವುದು ಎಂದು ಕೂಲಂಕಶ ಚರ್ಚೆ ಮಾಡಿಲ್ಲ. ವ್ಯಾಪಾರಿಗಳಿಗೆ ಮಾಹಿತಿಯನ್ನೂ ನೀಡಿಲ್ಲ. ಕೇಂದ್ರ ಸರ್ಕಾರದ ನೀತಿ ಪ್ರಕಾರ ವಾರ್ಷಿಕ ವಹಿವಾಟು 40 ಲಕ್ಷ ರು. ಮೀರಿದರೆ ಜಿಎಸ್‍ಟಿಯಡಿ ನೋಂದಾಯಿಸಿಕೊಂಡು ತೆರಿಗೆ ಪಾವತಿಸಬೇಕು. ಆದರೆ, ಇಲ್ಲಿ ವಾರ್ಷಿಕ ವಹಿವಾಟು 20 ಲಕ್ಷ ರು. ಮೀರಿರುವ ವ್ಯಾಪಾರಿಗಳಿಗೂ ತೆರಿಗೆ ಕಟ್ಟುವಂತೆ ನೋಟಿಸ್ ನೀಡಿ ಗೊಂದಲ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದರು.
ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಕಳ್ಳರಲ್ಲ ಮತ್ತು ತೆರಿಗೆ ವಂಚಿಸುವವರಲ್ಲ. ಆದರೆ ತೆರಿಗೆ ಪರಿಸ್ಥಿತಿ ಅವರಿಗೆ ಅರ್ಥವಾಗಿಲ್ಲ. ಸರ್ಕಾರದವರು ಅವರಿಗೆ ಅರ್ಥ ಮಾಡಿಸದ ಪರಿಣಾಮ ಬಡ ವ್ಯಾಪಾರಿಗಳು ಗೊಂದಲದಲ್ಲಿದ್ದಾರೆ. ಹೀಗಾಗಿ ಸರ್ಕಾರ ಬಡ ಜನರ ರಕ್ಷಣೆಗೆ ಧಾವಿಸಬೇಕು ಎಂದು ಆಗ್ರಹಿಸಿದರು.
