20 ವರ್ಷಗಳ ಕೋಮಾದಲ್ಲಿದ್ದ ‘ಸ್ಲೀಪಿಂಗ್ ಪ್ರಿನ್ಸ್’ ಇನ್ನು ಏಳಲ್ಲ

ಸೌದಿ ಅರೇಬಿಯಾ:20 ವರ್ಷಗಳ ಕಾಲ ಕೋಮಾದಲ್ಲಿದ್ದ ಹಾಗೂ ‘ಸ್ಟೀಪಿಂಗ್ ಪ್ರಿನ್ಸ್’ ಎಂದೇ ಖ್ಯಾತರಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಶನಿವಾರ ನಿಧನರಾದರು. ಈ ರಾಜಕುಮಾರನಿಗೆ ಇತ್ತೀಚೆಗಷ್ಟೇ 36 ವರ್ಷ ತುಂಬಿತ್ತು.

ಎಲ್ಲರೂ ಅದನ್ನು ಭರ್ಜರಿಯಾಗಿ ಆಚರಿಸಿದರು. ಆದರೆ ಅದನ್ನು ನೋಡಲು ಆ ರಾಜಕುಮಾರ ಎಚ್ಚರವಿರಲಿಲ್ಲ. ಅವನು ಸುದೀರ್ಘ ನಿದ್ರೆಯಲ್ಲಿದ್ದ. ಅಂತಿಂಥ ನಿದ್ರೆಯಲ್ಲ, 20 ವರ್ಷಗಳಿಂದ ಆತ ನಿದ್ರೆ ಅಥವಾ ಕೋಮಾದಲ್ಲಿದ್ದನೆ. ಹೀಗಾಗಿಯೇ ಅವನನ್ನು ʼಸ್ಲೀಪಿಂಗ್ ಪ್ರಿನ್ಸ್ʼ ಅಥವಾ ನಿದ್ರಿಸುವ ರಾಜಕುಮಾರ ಎಂದು ಕರೆಯಲಾಗಿತ್ತು. ಇದೀಗ ಚಿರನಿದ್ರೆಗೆ ಸಂದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ರಿಯಾದ್ನಲ್ಲಿ ನಡೆಯಲಿದೆ ಎಂದು ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಹೇಳಿದ್ದಾರೆ.
“ಸ್ಲೀಪಿಂಗ್ ಪ್ರಿನ್ಸ್” ಎಂದೇ ಪ್ರಸಿದ್ಧನಾಗಿದ್ದ ಸೌದಿ ರಾಜಮನೆತನದ ಸದಸ್ಯ, ಪ್ರಿನ್ಸ್ ಅಲ್-ವಲೀದ್ ಬಿನ್ ಖಲೀದ್ ಬಿನ್ ತಲಾಲ್ ಏಪ್ರಿಲ್ 18, 2025ರಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಅವರ ಪರವಾಗಿ ಕುಟುಂಬದ ಎಲ್ಲರೂ ಆಚರಿಸಿದರು. ನಿದ್ರೆಯಲ್ಲಿದ್ದ ಪ್ರಿನ್ಸ್ ಮುಂದೆ ಕೇಕ್ ಕಟ್ ಮಾಡಿದ್ದರು. ಹುಟ್ಟುಹಬ್ಬದ ನಂತರ ‘ಸ್ಲೀಪಿಂಗ್ ಪ್ರಿನ್ಸ್’ನ ಫೋಟೋಗಳನ್ನು ಕುಟುಂಬದವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ವ್ಯಾಪಕವಾಗಿ ಗಮನ ಸೆಳೆದಿತ್ತು.
2005ರಲ್ಲಿ ನಡೆದ ಒಂದು ಕಾರು ಅಪಘಾತದಲ್ಲಿ ಈತನ ತಲೆಗೆ ಬಲವಾದ ಏಟು ಬಿದ್ದಿತ್ತು. ಆಗ ಕೋಮಾಗೆ ಹೋದ ಈತ ನಂತರ ಎಚ್ಚರವಾಗಲೇ ಇಲ್ಲ. ಇಪ್ಪತ್ತು ವರ್ಷಗಳಿಂದ ಈತನನ್ನು ಜೀವರಕ್ಷಕ ಸಾಧನಗಳ ಮೇಲೆ ಇಡಲಾಗಿತ್ತು. ಇದರಿಂದ ಏನೂ ಪ್ರಯೋಜನವಿಲ್ಲ ಎಂದಿದ್ದರು ವೈದ್ಯರು. ಆದರೆ ವೈದ್ಯಕೀಯ ಸಲಹೆಯ ಹೊರತಾಗಿಯೂ ಅವನ ತಂದೆ ಆತನನ್ನು ಹಾಸಿಗೆಯ ಮೇಲೆ ಉಳಿಸಿಕೊಂಡಿದ್ದರು. ಇವನು ಸೌದಿ ಅರೇಬಿಯಾದ ಸಂಸ್ಥಾಪಕ ಕಿಂಗ್ ಅಬ್ದುಲಜೀಜ್ ಅವರ ಮರಿಮೊಮ್ಮಗ. ರಿಯಾದ್ನಲ್ಲಿ ಒಂದು ಐಷಾರಾಮಿ ಮನೆಯಲ್ಲಿ ಲೈಫ್ ಸಪೋರ್ಟ್ನಲ್ಲಿದ್ದ. ಯಾವತ್ತಾದರೊಂದು ದಿನ ಆತ ನಿದ್ರೆ ತಿಳಿದೇಳಬಹುದು ಎಂದು ಅವನ ಕುಟುಂಬಕ್ಕೆ ಆಶೆಯಿತ್ತು.
ರೋಯಾ ನ್ಯೂಸ್ ವರದಿ ಮಾಡಿದಂತೆ ರಾಜಕುಮಾರನನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಎರಡು ದಶಕಗಳಿಂದ ಫೀಡಿಂಗ್ ಟ್ಯೂಬ್ ಮೂಲಕ ಆಹಾರವನ್ನು ನೀಡಲಾಗುತ್ತಿತ್ತು. 2019ರಲ್ಲಿ ಈತ ಬೆರಳನ್ನು ಸ್ವಲ್ಪ ಎತ್ತಿದ. ತಲೆಯನ್ನು ಕೊಂಚ ಚಲಿಸಿದ. ಹೀಗೆ ಅರಿವಿನ ಸ್ವಲ್ಪ ಲಕ್ಷಣಗಳನ್ನು ತೋರಿಸಿದ. ಆದರೆ ಪೂರ್ಣ ಪ್ರಜ್ಞೆಗೆ ಮರಳಲಿಲ್ಲ. ಜೀವರಕ್ಷಕ ವ್ಯವಸ್ಥೆ ತೆಗೆಯಲು ವೈದ್ಯಕೀಯ ಸಲಹೆ ನೀಡಿದಾಗ ಅವನ ತಂದೆ ಖಲೀದ್ ಬಿನ್ ತಲಾಲ್ ಅಲ್ ಸೌದ್, “ಅವನು ಅಪಘಾತದಲ್ಲಿ ಸಾಯಬೇಕೆಂದು ದೇವರು ಬಯಸಿದ್ದರೆ ಅವನು ಈಗಾಗಲೇ ಸಮಾಧಿಯಲ್ಲಿ ಇರುತ್ತಿದ್ದ” ಎಂದಿದ್ದರು.
ರಾಜಕುಮಾರ ಅಲ್-ವಲೀದ್ ಬಿನ್ ಖಲೀದ್ ಬಿನ್ ತಲಾಲ್, ಸೌದಿ ರಾಜಮನೆತನದ ಸದಸ್ಯನಾಗಿದ್ದರೂ ಈಗಿನ ರಾಜನ ನೇರ ಮಗ ಅಥವಾ ಸಹೋದರನಲ್ಲ. ಇವನ ಅಜ್ಜ ರಾಜಕುಮಾರ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್, ಆಧುನಿಕ ಸೌದಿ ಅರೇಬಿಯಾದ ಸ್ಥಾಪಕ ದೊರೆ ರಾಜ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಅನೇಕ ಪುತ್ರರಲ್ಲಿ ಒಬ್ಬರು. ಈ ವಂಶಾವಳಿಯ ಮೂಲಕ ನೋಡಿದರೆ ರಾಜಕುಮಾರ ಅಲ್-ವಲೀದ್, ಹಿರಿಯ ರಾಜ ಅಬ್ದುಲ್ ಅಜೀಜ್ ಅವರ ಮರಿಮೊಮ್ಮಗ. ಈಗಿನ ಆಡಳಿತಗಾರ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಈತನಿಗೆ ಮಾವ ಆಗಬೇಕು.
