ಎಸ್.ಎಲ್ ಭೈರಪ್ಪ ಅಂತ್ಯಕ್ರಿಯೆ: ಅಕ್ಷರ ಮಾಂತ್ರಿಕ ಪಂಚಭೂತಗಳಲ್ಲಿ ಲೀನ

ಬದುಕಿನ ʻಯಾನʼ ಮುಗಿಸಿದ `ಅಕ್ಷರ ಮಾಂತ್ರಿಕ’ ಎಸ್.ಎಲ್ ಭೈರಪ್ಪ (SL Bhyrappa) ಪಂಚಭೂತಗಳಲ್ಲಿ ಲೀನವಾಗಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪಾರ್ಥಿವ ಶರೀರಕ್ಕೆ ಮಾನಸ ಪುತ್ರಿ ಸಹನಾ ವಿಜಯಕುಮಾರ್ ಅವರು ಅಂತಿಮ ನಮನ ಸಲ್ಲಿಸಿದ ಬಳಿಕ ಪುತ್ರರು ಅಗ್ನಿಸ್ಪರ್ಶ ಮಾಡಿದರು.

ಇಂದು ಬೆಳಗ್ಗೆಯಿಂದಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿತ್ತು. ಕುಟುಂಬಸ್ಥರು, ಗಣ್ಯರು ಅಂತ್ಯಸಂಸ್ಕಾರ ವೀಕ್ಷಣೆಗೆ ಜರ್ಮನ್ ಟೆಂಟ್ ಹಾಕಿ ಕುರ್ಚಿಗಳನ್ನಿಟ್ಟು ವ್ಯವಸ್ಥೆ ಮಾಡಲಾಗಿತ್ತು. ಮೈಸೂರು ಎಡಿಸಿ ಶಿವರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಸಕಲ ಸಿದ್ಧತೆ ಪರಿಶೀಲಿಸಿದ್ದರು, ಪೊಲೀಸ್ ಭದ್ರತೆಯನ್ನೂ ನಿಯೋಜಿಸಲಾಗಿತ್ತು.
ನಂತರ ಭೈರಪ್ಪನವರ ಪಾರ್ಥೀವ ಶರೀರದ ಮೇಲೆ ತ್ರಿವರ್ಣಧ್ವಜ ಹೊದಿಸಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಇದೇ ವೇಳೆ ಚಿತಾಗಾರದ ಬಳಿಕ ಪೊಲೀಸ್ ತುಕಡಿ ಪೊಲೀಸ್ ಬ್ಯಾಂಡ್ ನಡೆಸಿಕೊಟ್ಟರು. ಬಳಿಕ ಬೈರಪ್ಪ ಪುತ್ತರ ಕೈಗೆ ಪೊಲೀಸರು ರಾಷ್ಟ್ರಧ್ವಜ ಹಸ್ತಾಂತರಿಸಿದರು.