ಸಹೋದರನ ಸಾವಿನ ನೋವಿನಲ್ಲಿ ಊರಿಗೆ ಬಂದ ಅಕ್ಕನೂ ಅಪಘಾತಕ್ಕೆ ಬಲಿ – ಪಾವಂಜೆಯಲ್ಲಿ ಭೀಕರ ದುರಂತ, ಕುಟುಂಬಕ್ಕೆ ಬರಸಿಡಿಲು!

ಮಂಗಳೂರು: ಸಹೋದರನ ನಿಧನ ಹಿನ್ನೆಲೆ ಊರಿಗೆ ಬಂದಿದ್ದ ಅಕ್ಕನೂ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಪಾವಂಜೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಕಾರು-ಆಯಕ್ಟಿವಾ ಅಪಘಾತದ ಗಾಯಾಳು ಬಂಗ್ರಕೂಳೂರು ನಿವಾಸಿ ಶ್ರುತಿ(27) ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗಾಯಾಳು ಶ್ರುತಿ ಅವರ ತಂದೆ ಗೋಪಾಲಾಚಾರ್ಯ(57) ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಕಾರು ಚಾಲಕ ಹೊನ್ನಾವರ ನಿವಾಸಿ ಪ್ರಶಾಂತ್ ವಿರುದ್ಧ ನಿರ್ಲಕ್ಷ್ಯ, ಅತಿ ವೇಗದ ಚಾಲನೆ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನಲ್ಲಿ ಭಾಸ್ಕರ ಶೆಟ್ಟಿ ಎಂಬವರಿದ್ದು ಅವರು ಮಣಿಪಾಲದಿಂದ ಕಾಸರಗೋಡು ದೇವಸ್ಥಾ ನವೊಂದಕ್ಕೆ ಪೂಜೆ ಗಾಗಿ ಹೊರಟಿದ್ದರು. ಕಾರಿನಲ್ಲಿದ್ದವರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದು, ಆಯಕ್ಟಿವಾದಲ್ಲಿ ಇದ್ದವರು ಮಳೆ ಬಂದ ಕಾರಣ ಇಲ್ಲಿನ ಸೀಯಾಳ ಅಂಗಡಿ ಎದುರು ರೈನ್ ಕೋಟ್ ಧರಿಸಲು ನಿಂತಿದ್ದಾಗ ಯಮ ಸ್ವರೂಪಿಯಾಗಿ ಬಂದಿದ್ದ ಈ ಕಾರು ಅವರ ಮೇಲೆರಗಿ ದುರ್ಘಟನೆ ಸಂಭವಿಸಿದೆ.

ಗೋಪಾಲಾಚಾರ್ಯ ದಂಪತಿಗೆ ಇವರಿಬ್ಬರೇ ಮಕ್ಕಳಿದ್ದು ಪುತ್ರಿಯೂ ಇದೀಗ ಮೃತಪಟ್ಟಿದ್ದಾರೆ. ಸಹೋದರ ಮೃತಪಟ್ಟಿದ್ದಕ್ಕೆ ಚೆನ್ನೈನಿಂದ ಬಂದಿದ್ದ ಶ್ರುತಿ, ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾವಂತೆ. ಕೂಳೂರು, ಮಂಗಳೂರಿನಲ್ಲಿ ತನ್ನ ಶಿಕ್ಷಣ ಪೂರ್ಣಗೊಳಿಸಿದ್ದರು. ಕಂಪ್ಯೂಟರ್ ಎಂಜಿನಿಯರಿಂಗ್ ಕಲಿತಿದ್ದು ಚೆನ್ನೈನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದರು. ಜೂ.10ರಂದು ತನ್ನ ಸಹೋದರ, ಕ್ಯಾನಿಕ್ ಆಗಿದ್ದ ಸುಜಿತ್ (24) ಮೃತಪಟ್ಟ ಹಿನ್ನೆಲೆಯಲ್ಲಿ ರಜೆಯಲ್ಲಿ ಬಂದಿದ್ದರು.
