ರಾಖಿ ಕಟ್ಟಲು 14 ವರ್ಷದಿಂದ ಕಾಯುತ್ತಿರುವ ಸಹೋದರಿ: ಪಾಕ್ ಜೈಲಿನಲ್ಲಿ ಭಾರತೀಯ ಯುವಕ

ಬಾಲಾಘಾಟ್ (ಮಧ್ಯಪ್ರದೇಶ): ಕಳೆದ 14 ವರ್ಷಗಳಿಂದ ತನ್ನ ಸಹೋದರನಿಗಾಗಿ ಮಹಿಳೆಯೊಬ್ಬಳು ರಾಖಿ ಕಟ್ಟುವ ಸಲುವಾಗಿ ಕಾಯುತ್ತಿರುವ ವಿಷಯ ಸದ್ಯ ಈಗ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಕೋಟ್ ಲಖ್ಪತ್ ಸೆಂಟ್ರಲ್ ಜೈಲಿನಲ್ಲಿ ಸುಮಾರು 14 ವರ್ಷದಿಂದ ಸೆರೆಯಾಗಿರುವ ತಮ್ಮ ಸಹೋದರ ಪ್ರಸನ್ನಜಿತ್ ರಂಗಾರಿಗಾಗಿ ಸಂಘಮಿತ್ರಾ ಖೋಬ್ರಾಗಡೆ ಎಂಬಾಕೆಯು ರಾಖಿ ಕಟ್ಟಲು ಕಾಯುತ್ತಿದ್ದಾರೆ.
ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನಕ್ಕೆ ಅಂಚೆ ಮತ್ತು ಕೊರಿಯರ್ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ ಸಹೋದರನಿಗೆ ಸಂಘಮಿತ್ರಾ ಬರೆದ ಭಾವನಾತ್ಮಕ ಪತ್ರ ತಲುಪಿಸಲಾಗಲಿಲ್ಲ. ತಮ್ಮ ಸಂದೇಶದಲ್ಲಿ, ಅವರು ತಮ್ಮ ಆಳವಾದ ಹಂಬಲ, ತಾಯಿಯ ಕಣ್ಣೀರು ಮತ್ತು ತಮ್ಮ ಸಹೋದರ ಮನೆಗೆ ಮರಳುವವರೆಗೂ ಬೇರೆ ಯಾರಿಗೂ ರಾಖಿ ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
“ಸಹೋದರ, ರಕ್ಷಾ ಬಂಧನ ಬಂದರೆ ನಿಮ್ಮನ್ನು ತುಂಬಾ ನೆನಪು ಮಾಡಿಕೊಳ್ಳುತ್ತೇನೆ. ನಿಮಗೆ ರಾಖಿ ಕಳುಹಿಸಲು ಬಯಸುತ್ತೇನೆ, ಆದರೆ ನೀವು ಭಾರತದಿಂದ ಬಹಳ ದೂರದಲ್ಲಿದ್ದೀರಿ. ರಾಖಿಯನ್ನು ಪ್ರೀತಿಯಿಂದ ಕಳುಹಿಸುತ್ತಿದ್ದೇನೆ ಮತ್ತು ಭಾರತ ಸರ್ಕಾರ ಅದನ್ನು ಸ್ವೀಕರಿಸಿ, ಲಾಹೋರ್, ಪಾಕಿಸ್ತಾನದ ಕೋಟ್ ಲಖ್ಪತ್ ಜೈಲಿನಲ್ಲಿರುವ ನನ್ನ ಸಹೋದರನಿಗೆ ಕಳುಹಿಸುತ್ತದೆ ಎಂದು ಭಾವಿಸುತ್ತೇನೆ. ಆಗ ಒಬ್ಬ ಸಹೋದರಿಯಾಗಿ ನನ್ನ ಆಸೆ ಈಡೇರುತ್ತದೆ. ಎಲ್ಲ ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟುತ್ತಾರೆ, ಆದರೆ ನಾನು ದುರದೃಷ್ಟವಂತ ಸಹೋದರಿ, ನನಗೆ ರಾಖಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಅಮ್ಮ ನಿಮ್ಮನ್ನು ತುಂಬಾ ನೆನಪು ಮಾಡಿಕೊಳ್ಳುತ್ತಾರೆ ಮತ್ತು ನಿಮಗಾಗಿ ಕಾಯುತ್ತಿದ್ದಾರೆ. ನಿಮ್ಮ ಸೋದರ ಅಳಿಯಂದಿರು ಕೂಡ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ ಮತ್ತು ನಿಮ್ಮನ್ನು ನೋಡಬೇಕು ಎಂದು ಹೇಳುತ್ತಿರುತ್ತಾರೆ…” ಎಂದು ಆಕೆ ಪತ್ರದಲ್ಲಿ ಬರೆದಿದ್ದಾರೆ.
ಒಂದು ಕಾಲದಲ್ಲಿ ಪ್ರತಿಭಾವಂತ ಫಾರ್ಮಸಿ ವಿದ್ಯಾರ್ಥಿಯಾಗಿದ್ದ ಪ್ರಸನ್ನಜಿತ್, ಹಲವು ವರ್ಷಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದರು. 2021 ರಲ್ಲಿ ಕೋಟ್ ಲಖ್ಪತ್‌ನಿಂದ ಬಿಡುಗಡೆಯಾದ ಮಾಜಿ ಭಾರತೀಯ ಕೈದಿಯೊಬ್ಬರು ಅವರು ಜೀವಂತವಾಗಿದ್ದಾರೆ ಎಂದು ಕುಟುಂಬಕ್ಕೆ ತಿಳಿಸುವವರೆಗೂ ಮನೆಯವರೆಲ್ಲರು ಅವರು ಮೃತಪಟ್ಟಿದ್ದಾರೆ ಎಂದೇ ನಂಬಿದ್ದರು. ಪಾಕಿಸ್ತಾನವು 2019ರ ಅಕ್ಟೋಬರ್‌ನಲ್ಲಿ ಅವರನ್ನು ಬಟಾಪುರದಿಂದ ಬಂಧಿಸಿದೆ ಎಂದು ದಾಖಲೆಗಳು ತಿಳಿಸುತ್ತದೆ. ಅಲ್ಲಿ ಅವರನ್ನು ಬೇರೆ ಹೆಸರಿನಲ್ಲಿ ದಾಖಲಿಸಲಾಗಿದೆ. ಆದರೆ ಅವರು ತಮ್ಮ ನಿಜವಾದ ಗುರುತು ಮತ್ತು ಕುಟುಂಬದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ತಮ್ಮ ಮಗನ ಮರಳುವುಕೆಗಾಗಿ ಕಾಯುತ್ತಲೇ ಅವರ ತಂದೆ ನಿಧನರಾದರು, ಆದರೆ ಅವರ ತಾಯಿ, ಈಗ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಇಬ್ಬರು ಮಕ್ಕಳ ತಾಯಿ ಮತ್ತು ದಿನಗೂಲಿ ಕಾರ್ಮಿಕರಾದ ಸಂಘಮಿತ್ರಾ, ತಮ್ಮ ಸಹೋದರನ ಬಿಡುಗಡೆಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈಗಾಗಲೇ ಜೀವನ ನಡೆಸಲು ಹೆಣಗಾಡುತ್ತಿರುವ ಈ ಕುಟುಂಬ, ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳುತ್ತಾರೆ, ಇದರಿಂದ ಒಂದು ದಿನ ರಕ್ಷಾ ಬಂಧನ ನಿಜವಾದ ಹಬ್ಬವಾಗುತ್ತದೆ ಎಂದು ಆಶಿಸಿದೆ.
