ಬಿಹಾರ ಚುನಾವಣಾ ಅಖಾಡಕ್ಕೆ ಗಾಯಕಿ ಮೈಥಿಲಿ ಠಾಕೂರ್ ಎಂಟ್ರಿ? ಬಿಜೆಪಿ ನಾಯಕರ ಭೇಟಿ ಬಳಿಕ ಸ್ಪರ್ಧೆಯ ಚರ್ಚೆ, ಸ್ವತಃ ಮೈಥಿಲಿ ಹೇಳಿದ್ದೇನು?

ಖ್ಯಾತ ಗಾಯಕಿ ಮೈಥಿಲಿ ಠಾಕೂರ್ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಅವರು ಇತ್ತೀಚಿಗಷ್ಟೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಮತ್ತು ಬಿಜೆಪಿ ನಾಯಕ ವಿನೋದ್ ತಾವ್ಡೆ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ಬಳಿಕ ಮೈಥಿಲಿ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಸ್ವತಃ ಮೈಥಿಲಿ ಏನು ಹೇಳಿದ್ದಾರೆ ನೋಡಿ.

ಈಗ ದೇಶದ ಚಿತ್ತ ಬಿಹಾರ ವಿಧಾನಸಭೆ ಚುನಾವಣೆಯ (Bihar Assembly Elections) ಮೇಲಿದ್ದು, ಯಾವ ಪಕ್ಷವು ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ನಡುವೆ ಬಿಜೆಪಿಯಿಂದ 25 ವರ್ಷದ ಖ್ಯಾತ ಗಾಯಕಿ ಮೈಥಿಲಿ ಠಾಕೂರ್ ಸ್ಪರ್ಧಿಸಲಿದ್ದಾರೆ, ರಾಜಕೀಯಕ್ಕೆ ಅವರು ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಅವರು ತಮ್ಮ ತಂದೆಯೊಂದಿಗೆ ಇತ್ತೀಚಿಗಷ್ಟೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಮತ್ತು ಬಿಜೆಪಿ ನಾಯಕ ವಿನೋದ್ ತಾವ್ಡೆ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ಫೋಟೋವನ್ನು ವಿನೋದ್ ತಾವ್ಡೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ಮೈಥಿಲಿ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಸ್ವತಃ ಮೈಥಿಲಿ ಏನು ಹೇಳಿದ್ದಾರೆ ನೋಡಿ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮೈಥಿಲಿ ಮಾತು:
ಜಬಲ್ಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜನಪದ ಗಾಯಕಿ ಮೈಥಿಲಿ ಠಾಕೂರ್, “ನಾನು ಕೂಡ ಇದನ್ನೆಲ್ಲಾ ಟಿವಿಯಲ್ಲಿ ನೋಡುತ್ತಿದ್ದೇನೆ. ಇತ್ತೀಚೆಗೆ ನಾನು ಬಿಹಾರಕ್ಕೆ ಹೋಗಿದ್ದೆ ಮತ್ತು ನಿತ್ಯಾನಂದ ರಾಯ್ ಮತ್ತು ವಿನೋದ್ ತಾವ್ಡೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಬಿಹಾರದ ಭವಿಷ್ಯದ ಬಗ್ಗೆ ನಾವು ಚರ್ಚಿಸಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಏನಾಗುತ್ತದೆ ಎಂದು ನೋಡೋಣ. ನನ್ನ ಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಬಯಸುತ್ತೇನೆ ಏಕೆಂದರೆ ನನಗೆ ನನ್ನ ಹಳ್ಳಿಯ ಅಭಿವೃದ್ಧಿಯ ಬಗ್ಗೆ ಬಲವಾದ ಒಲವು ಇದೆ” ಎಂದಿದ್ದಾರೆ.
ಇನ್ನೂ ರಾಜಕೀಯ ಒಲವುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, “ಈ ಬಗ್ಗೆ ನಾನು ಈಗ ಪ್ರತಿಕ್ರಿಯಿಸಲು ಬಯಸುವುದಿಲ್ಲ. ದೇಶದ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೊಡುಗೆ ನೀಡಲು ನಾನು ಬಲವಾಗಿ ನಿಲ್ಲುತ್ತೇನೆ” ಎಂದಿದ್ದಾರೆ.
ಮೈಥಿಲಿ ಮಾಧ್ಯಮಗಳೊಂದಿಗೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದಂತಹ ವಿಡಿಯೋವನ್ನು ANI ಅಧೀಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಬಗ್ಗೆ ನೆಟ್ಟಿಗರು ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ʼಮೈಥಿಲಿ ಭಾರತೀಯ ಸಂಸ್ಕೃತಿ ಮತ್ತು ಜನರೊಂದಿಗೆ ಸಂಪರ್ಕ ಹೊಂದಿರುವ ಹುಡುಗಿ, ಆಕೆಯ ರಾಜಕೀಯ ಪ್ರವೇಶದಿಂದ ಬಿಹಾರ ಮತ್ತು ಭಾರತದ ಅಭಿವೃದ್ಧಿ ಆಗಲಿದೆʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬೇರೆಯವರಿಗೆ ಹೋಲಿಸಿದರೆ ಖಂಡಿತವಾಗಿಯೂ ಇವರು ಚುನಾವಣೆಯಲ್ಲಿ ಸ್ಪರ್ಧಿಸಲು ಒಳ್ಳೆಯ ಅಭ್ಯರ್ಥಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಜಾಪ್ರಭುತ್ವದಲ್ಲಿ ಯುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗಬೇಕುʼ ಎಂದು ಹೇಳಿದ್ದಾರೆ.