ಗಾಯಕ ಜುಬೀನ್ ಗಾರ್ಗ್ ಸಾವು: ತನಿಖೆಗಾಗಿ ಸಿಂಗಾಪುರದೊಂದಿಗೆ MLAT ಜಾರಿ

ಗುವಾಹಟಿ: ಗಾಯಕ ಜುಬೀನ್ ಗಾರ್ಗ್ (Zubeen Garg) ಸಾವಿನ ತನಿಖೆಗೆ ಸಹಕಾರ ಕೋರಿ ಕೇಂದ್ರವು ಸಿಂಗಾಪುರದೊಂದಿಗೆ (Singapore) ಪರಸ್ಪರ ಕಾನೂನು ಸಹಾಯ ಒಪ್ಪಂದವನ್ನು ಔಪಚಾರಿಕವಾಗಿ ಜಾರಿಗೆ ತಂದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಪ್ರೀತಿಯ ಜುಬೀನ್ ಅವರ ನಿಧನದ ಕುರಿತು ಅಸ್ಸಾಂ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಗೃಹ ಸಚಿವಾಲಯವು ಈಗ ಪರಸ್ಪರ ಕಾನೂನು ಸಹಾಯ ಒಪ್ಪಂದವನ್ನು ಔಪಚಾರಿಕವಾಗಿ ಅನ್ವಯಿಸಿದೆ ಎಂದು ತಿಳಿಸಿದ್ದಾರೆ.
ಪರಸ್ಪರ ಕಾನೂನು ಸಹಾಯ ಒಪ್ಪಂದ ಜಾರಿಗೆ ಬಂದ ನಂತರ, ಸಿಂಗಾಪುರದ ಅಧಿಕಾರಿಗಳಿಂದ ಪ್ರಕರಣದ ವಿವರಗಳನ್ನು ಪಡೆಯುವುದು, ಆರೋಪಿಗಳನ್ನು ಮರಳಿ ಕರೆತರುವಲ್ಲಿ ಸಹಾಯ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಸಂಪೂರ್ಣ ಸಹಕಾರವನ್ನು ಖಚಿತಪಡಿಸುತ್ತದೆ ಎಂದು ಶರ್ಮಾ ಸೋಮವಾರ ನುಡಿದಿದ್ದರು.
ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಗಾಯಕನ ಸಾವಿನ ತನಿಖೆಗಾಗಿ ಅಸ್ಸಾಂ ಸರ್ಕಾರ ವಿಶೇಷ ಡಿಜಿಪಿ ಎಂಪಿ ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮತ್ತು ಅವರ ಸಹಾಯ ಪಡೆಯಲು ಇಬ್ಬರು ಅಸ್ಸಾಂ ಪೊಲೀಸ್ ಅಧಿಕಾರಿಗಳನ್ನು ಈಗಾಗಲೇ ಸಿಂಗಾಪುರಕ್ಕೆ ಕಳುಹಿಸಲಾಗಿದೆ ಎಂದು ಶರ್ಮಾ ಹೇಳಿದರು.