ಗಾಯಕಿ ದೇವಿ IVF ಮೂಲಕ ತಾಯ್ತನ ಅನುಭವ

ನವದೆಹಲಿ: ಭೋಜಪುರಿ ಸಿಂಗರ್ ದೇವಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಗಾಯಕಿ ದೇವಿ ಅವರನ್ನು ಮಧುರ ಧ್ವನಿಯ ಗಾಯಕಿ (ಸೂರೋಂ ಕೀ ಮಲ್ಲಿಕಾ) ಎಂದು ಗುರುತಿಸಲಾಗುತ್ತದೆ. ಗಂಡು ಮಗುವಿನ ತಾಯಿಯಾಗಿರುವ ಸಿಂಗರ್ ದೇವಿ ಅವರು ಮದುವೆಯಾಗಿಲ್ಲ. ಅವಿವಾಹಿತೆಯಾಗಿರುವ ದೇವಿ ಐವಿಎಫ್ ಮೂಲಕ ತಾಯ್ತನ ಅನುಭವಿಸುತ್ತಿದ್ದಾರೆ. ಹೃಷಿಕೇಶನ ಎಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಅಜ್ಜನಾದ ಖುಷಿ ಹಂಚಿಕೊಂಡ ಗಾಯಕಿ ತಂದೆ
ಜರ್ಮನಿಯ ಸ್ಪರ್ಮ್ ಬ್ಯಾಂಕ್ ಸಹಾಯದಿಂದ ಮಗಳು ಗರ್ಭವತಿಯಾಗಿದ್ದಾಳೆ. ಏಳು ವರ್ಷಗಳ ಹಿಂದೆಯೂ ಐವಿಎಫ್ ಮೂಲಕ ತಾಯಿಯಾಗಲು ಪ್ರಯತ್ನಿಸಿದ್ದಳು. ಆದ್ರೆ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಮಗಳು ಮದುವೆಯಾಗದೇ ಗಂಡು ಮಗುವಿಗೆ ಜನ್ಮ ನೀಡಿದ್ದು, ನಾನು ಅಜ್ಜನಾಗಿದ್ದೇನೆ ಎಂದು ಗಾಯಕಿ ದೇವಿ ತಂದೆ ಪ್ರಮೋದ್ ಕುಮಾರ್ ಹೇಳಿದ್ದಾರೆ.
ಮಗುವಿನ ವಿಡಿಯೋ ಹಂಚಿಕೊಂಡ ಗಾಯಕಿ ದೇವಿ
ಇನ್‌ಸ್ಟಾಗ್ರಾಂನಲ್ಲಿ ದೇವಿ ಅವರು ಮಗುವಿನ ಮುದ್ದಾದ ವಿಡಿಯೋವನ್ನು ಶೇರ್ ಮಾಡಿಕೊಂಡಿ ದ್ದು , ‘ಮೇರಾ ಬಾಬೂ ಹೈ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಕಮೆಂಟ್ ಮಾಡುವ ಮೂಲಕ ತಾಯಿಯಾಗಿರುವ ದೇವಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಇಂದು ಆಧುನಿಕ ವೈದ್ಯಕೀಯ ವಿಧಾನಗಳ ಮೂಲಕ ಮಹಿಳೆಯರು ತಾಯಿಯಾಗ್ತಿರೋದು ಟ್ರೆಂಡ್ ಆಗುತ್ತಿದೆ. ಸ್ವಾವಲಂಬಿಯಾಗಿ ಬದುಕಲು ಇಚ್ಛಿಸುವ ಮಹಿಳೆಯರು, ಈ ವಿಧಾನದ ಮೂಲಕ ತಾಯಿಯ ಪದವಿ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಒಂದು ಟ್ರೆಂಡ್ ಸಾಮಾಜಿಕ ಕಲ್ಪನೆಗಳನ್ನು ಅಂತ್ಯಗೊಳಿಸುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಾಲು ಸಾಲು ಸೂಪರ್ ಹಿಟ್ ಹಾಡುಗಳು
ಇನ್ನು ಗಾಯಕಿ ದೇವಿ ತಮ್ಮ ಲೋಕಗೀತೆಗಳ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಛಾಪ್ರಾದಲ್ಲಿ ಹುಟ್ಟಿ ಬೆಳೆದ ದೇವಿ, ಹಾಡುಗಳಲ್ಲಿನ ಅಶ್ಲೀಲ ಪದಗಳನ್ನು ಬಹಿರಂಗವಾಗಿ ವಿರೋಧಿಸಿದ್ದರು. ಭೋಜಪುರಿ ಮಾತ್ರವಲ್ಲದೇ ಹಿಂದಿ, ಮೈಥಿಲಿ ಮತ್ತು ಮಗ್ಹಿ ಭಾಷೆಯ ಹಾಡುಗಳನ್ನು ದೇವಿ ಹಾಡಿದ್ದಾರೆ. ದೇವಿ ಅವರ ‘ಪಿಯಾ ಗಯಿಲ್ ಕಲಕ್ಕತ್ತವಾ ಎ ಸಜನಿ’ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ದಿಲ್ ತುಜೇ ಪುಕಾರೇ ಆಜಾ, ಆಯಿಲ್ ಮೇರೆ ರಾಜಾ, ಓ ಗೋರಿ ಚೋರಿ ಚೋರಿ ಮತ್ತು ಪರದೇಸಿಯಾ-ಪರದೇಸಿಯಾ ಸೂಪರ್ ಹಿಟ್ ಹಾಡುಗಳಿಗೆ ದೇವಿ ಧ್ವನಿಯಾಗಿದ್ದಾರೆ.
ನಟಿ ಭಾವನಾಗೆ ಹೆಣ್ಣು ಮಗು ಜನನ
ನಟಿ ಭಾವನಾ ರಾಮಣ್ಣ ಅವರು ಹೆಣ್ಣು ಮಗುವಿನ ತಾಯಿ ಆಗಿದ್ದಾರೆ. ಒಂದು ವಾರದ ಹಿಂದೆಯೇ ಅವರಿಗೆ ಹೆರಿಗೆ ಆಗಿದ್ದು, ಗರ್ಭಾವಸ್ಥೆಯಲ್ಲಿ ಸಮಸ್ಯೆಯಿದ್ದ ಕಾರಣ ಎಂಟನೇ ತಿಂಗಳಲ್ಲೇ ಹೆರಿಗೆ ಮಾಡಲಾಗಿದೆ ಎನ್ನಲಾಗಿದೆ. ಹೆರಿಗೆ ಸಮಯದಲ್ಲಿ ಒಂದು ಮಗು ತೀರಿಕೊಂಡಿದ್ದು, ಇನ್ನೊಂದು ಮಗು ಮತ್ತು ಭಾವನಾ ಅವರು ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿಯಾಗುವ ನಿರ್ಧಾರ ಮಾಡಿದ್ದ ಭಾವನಾ ರಾಮಣ್ಣ ಅವರ ತಾಯಿ ಆಗುವ ಕನಸಿಗೆ ದೊಡ್ಡ ಮಟ್ಟದಲ್ಲಿ ಶುಭ ಹಾರೈಕೆಗಳು ಬಂದಿದ್ದವು. ಏಳನೇ ತಿಂಗಳಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಕೂಡ ಮಾಡಿಕೊಂಡಿದ್ದರು. ವೈದ್ಯರು ಅಕ್ಟೋಬರ್ ತಿಂಗಳಲ್ಲಿ ಹೆರಿಗೆಗೆ ದಿನಾಂಕ ನಿಗದಿ ಮಾಡಿದ್ದು, ಹೊಟ್ಟೆಯೊಳಗಿದ್ದ ಎರಡು ಮಕ್ಕಳ ಪೈಕಿ ಒಂದು ಮಗುವಿಗೆ ಏಳನೇ ತಿಂಗಳಿಗೇ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ವೈದ್ಯರ ಸಲಹೆ ಮೇರೆಗೆ ಎಂಟನೇ ತಿಂಗಳಿಗೇ ಹೆರಿಗೆ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.
