ಸಿಂಧನೂರು: ಸಾಲಕ್ಕಾಗಿ ಐಷಾರಾಮಿ ಕಾರುಗಳನ್ನೇ ಒತ್ತೆ ಇಡುವ ಹೊಸ ದಂಧೆ

ಸಿಂಧನೂರು: ಐಷಾರಾಮಿ ಕಾರುಗಳನ್ನು ಒತ್ತೆ ಇಟ್ಟು ಹೋಗುವ ಹೊಸ ಬೆಳವಣಿಗೆ ಇಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಸಾರಿಗೆ ಇಲಾಖೆ ಪಾಸಿಂಗ್ ಹೊಂದಿದ ನೂರಾರು ಕಾರುಗಳನ್ನು ಕೆಲವರ ಬಳಿ ಒತ್ತೆ ಇಟ್ಟಿರುವುದನ್ನು ನೋಡಿ ಜನ ಅಚ್ಚರಿಗೊಂಡಿದ್ದಾರೆ.

ಹೈಟೆಕ್ ಕಾರುಗಳನ್ನು ಮಾಲಕರೇ ತುರ್ತು ಹಣಕ್ಕಾಗಿ ಒತ್ತೆ ಇಟ್ಟು ಹೋಗುತ್ತಾರೆ. ತಿಂಗಳು ಅಥವಾ 2 ತಿಂಗಳ ಬಳಿಕ ಈ ಕಾರುಗಳನ್ನು ಬಿಡಿಸಿಕೊಂಡು ಹೋಗುತ್ತಾರೆ ಎನ್ನಲಾಗಿದೆ. ಕೆಲವು ತಿಂಗಳುಗಳಿಂದ ಈ ವಿದ್ಯಮಾನ ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿದೆ. ಕೆಲವರು ಐದಾರು ಐಷಾರಾಮಿ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ನಾಲ್ಕೈದು ಲಕ್ಷಕ್ಕೆ ಕಾರುಗಳನ್ನು ಒತ್ತೆ ಇರಿಸಿಕೊಂಡವರು ನಿತ್ಯವೂ ಬಳಕೆ ಮಾಡುತ್ತಾರೆ. ತಿಂಗಳಲ್ಲೇ ಅಂತಹ ಕಾರುಗಳು ನಾಪತ್ತೆಯಾಗಿ ಮತ್ತೆ ಹೊಸ ಕಾರು ಬರುತ್ತವೆ. ಇದೊಂದು ಫ್ಯಾಶನ್ ರೂಪದಲ್ಲಿ ಬದಲಾವಣೆಯಾಗಿದ್ದು, ಸಿಂಧನೂರಿನಲ್ಲಿ ಕೆಎ-35, ಕೆಎ-34 ಪಾಸಿಂಗ್‌ನ ನೂರಾರು ಕಾರುಗಳಿವೆ ಎನ್ನುತ್ತಾರೆ ಸ್ಥಳೀಯರು.
ಇದರ ಮೂಲ ಏನು?
ಇದಕ್ಕೆಲ್ಲ ಜೂಜು ಕಾರಣ ಎನ್ನುವ ಗುಮಾನಿ ವ್ಯಕ್ತವಾಗಿದೆ. ಇಸ್ಪೀಟ್ ಇಲ್ಲವೇ ಕ್ಯಾಸಿನೋ ಸಹವಾಸಕ್ಕೆ ಬಿದ್ದವರೇ ಹೀಗೆ ಮಾಡುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದಿವೆ. ಬಡ್ಡಿ ವ್ಯವಹಾರ ಈಗ ಕಾರಿನತ್ತ ತಿರುಗಿರುವುದರಿಂದ ಒತ್ತೆ ಇಟ್ಟುಕೊಂಡವರು ಮಜಾ ಮಾಡುವಂತಾಗಿದೆ. ಮಾತುಕತೆ ಮೂಲಕ ನಡೆಯುವ ವ್ಯವಹಾರ ಆಗಿರುವುದರಿಂದ ಯಾವುದೇ ದೂರುಗಳು ಸಲ್ಲಿಕೆಯಾಗುವುದಿಲ್ಲ ಎನ್ನಲಾಗಿದೆ.
ಬಡ್ಡಿ ಜತೆಗೆ ಕಾರು ಉಚಿತ!
ತಾತ್ಕಾಲಿಕವಾಗಿ ಕೆಲವು ದಿನಗಳ ಕಾಲ ಕಾರನ್ನು ಬಳಸಿಕೊಳ್ಳಲು ಬಡ್ಡಿ ವ್ಯವಹಾರಸ್ಥರಿಗೆ ಅನುಕೂಲವಾಗಿದೆ. ಕೊಟ್ಟ ಹಣಕ್ಕೂ ಬಡ್ಡಿ ಬರುತ್ತದೆ.
ಯಾವುದೋ ವ್ಯವಹಾರಕ್ಕೆ ನಿಯಮಬಾಹಿರವಾಗಿ ಕಾರುಗಳನ್ನು ಇಟ್ಟುಕೊಳ್ಳುವುದು, ಹಾಗೆಯೇ ಒತ್ತೆ ಇಡುವುದು ಕೂಡ ಅಪರಾಧ. ಇದರ ಹಿಂದಿನ ವ್ಯವಹಾರ ಏನು ಎನ್ನುವುದನ್ನು ಪತ್ತೆ ಹಚ್ಚುವ ಮೂಲಕ ಪೊಲೀಸರು ಇಂತಹ ದಂಧೆಗೆ ಕಡಿವಾಣ ಹಾಕಬೇಕು. -ಎಚ್.ಎನ್.ಬಡಿಗೇರ್, ಪ್ರಗತಿಪರ ಹೋರಾಟಗಾರ, ಸಿಂಧನೂರು