ಸಾವಿನಲ್ಲಿ ಒಂದಾದ ಅಣ್ಣ-ತಮ್ಮ: ಒಂದೇ ದಿನ ಹೃದಯಾಘಾತದಿಂದ ಇಬ್ಬರ ಸಾವು

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಸಾವಿನಲ್ಲಿಯೂ ಅಣ್ಣ-ತಮ್ಮ ಒಂದಾಗಿದ್ದಾರೆ.ಶಂಶೋದ್ದೀನ್ (42) ಹಾಗೂ ಇರ್ಫಾನ್ (38) ಎಂಬ ಇಬ್ಬರು ಸಹೋದರರು ಒಂದೇ ದಿನ ಹೃದಯಾಘಾತಕ್ಕೆ ಬಲಿಯಾಗಿ ಮೃತಪಟ್ಟಿದ್ದಾರೆ. ಮೊದಲಿಗೆ ಅಣ್ಣ ಶಂಶೋದ್ದೀನ್ ಹೃದಯಾಘಾತಕ್ಕೆ ಒಳಗಾಗಿದ್ದರೆ, ಆ ಸುದ್ದಿ ತಿಳಿದ ತಕ್ಷಣ ತಮ್ಮ ಇರ್ಫಾನ್‌ಗೂ ಹೃದಯಾಘಾತವಾಗಿದೆ.

ಎದೆನೋವು ಕಾಣಿಸಿಕೊಂಡ ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಕೊನೆಯುಸಿರೆಳೆದರು.ಈ ದುರಂತದಿಂದ ಕುಟುಂಬ ಹಾಗೂ ಕೆಂಭಾವಿ ಪಟ್ಟಣದಲ್ಲಿ ಶೋಕಸಮುದ್ರ ಆವರಿಸಿದೆ. ಇರ್ಫಾನ್ ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರೆ, ಶಂಶೋದ್ದೀನ್ ಕೃಷಿಕರಾಗಿದ್ದರು. ಕೆಂಭಾವಿ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
