ಹಳದಿ ಲೈನ್ ಮೆಟ್ರೋ ವ್ಯವಸ್ಥೆಗಳ ಕೊರತೆಯಿಂದ ಹಿರಿಯ ನಾಗರಿಕರು, ಮಕ್ಕಳಿಗೆ ತೊಂದರೆ

ಅಂದರೆ ಬೆಳಿಗ್ಗೆ 5:00 ಗಂಟೆಗೆ ಆರ್‌ವಿ ರಸ್ತೆ ಹಾಗೂ ದೆಹಲಿ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ಮೊದಲ ರೈಲುಗಳು ಹೊರಟಿವೆ. ಸಾಮಾನ್ಯವಾಗಿ ಮೆಟ್ರೋ ರೈಲುಗಳು ಸೋಮವಾರದಿಂದ ಬೆಳಿಗ್ಗೆ 6:30ಕ್ಕೆ ಚಾಲನೆ ಪಡೆಯುತ್ತವೆ. ಇಂದು ಪ್ರಯಾಣಿಕರ ಸೌಕರ್ಯಕ್ಕಾಗಿ ಇಂದು ಮಾತ್ರ ವಿಶೇಷವಾಗಿ ಒಂದು ಗಂಟೆ ಮುಂಚಿತವಾಗಿ ರೈಲುಗಳನ್ನು ಚಲಾಯಿಸಲಾಗಿದೆ. ಆದರೆ ಜನಜಂಗುಳಿ ಹೆಚ್ಚಾಗಿದ್ದು, ಕುಳಿತುಕೊಳ್ಳಲು ಸೀಟಿಂಗ್ ವ್ಯವಸ್ಥೆಯ ಕೊರತೆಯು ಕಂಡುಬಂದಿದೆ.

ಹೌದು, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೂ, ಹಳದಿ ಲೈನ್ ಮೆಟ್ರೋ ರೈಲು ಸಂಚಾರ ಆರಂಭವಾಗಿ ಈಗ ಎಂಟು ದಿನಗಳಾಗಿವೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲ ಎಂಬುದು ಈಗ ದೊಡ್ಡ ಅಸಮಾಧಾನಕ್ಕೆ ಕಾರಣವಾಗಿದೆ.
ಹಸಿರು ಮತ್ತು ನೇರಳೆ ಮಾರ್ಗದ ನಿಲ್ದಾಣಗಳಲ್ಲಿ ಕುರ್ಚಿ ಹಾಗೂ ಬೆಂಚ್ ವ್ಯವಸ್ಥೆ ಇದ್ದು, ಪ್ರಯಾಣಿಕರಿಗೆ ಕಾಯುವಲ್ಲಿ ತೊಂದರೆ ಆಗುವುದಿಲ್ಲ. ಆದರೆ ಹಳದಿ ಮಾರ್ಗದ 16 ನಿಲ್ದಾಣಗಳಲ್ಲಿ ಒಂದೇ ಒಂದು ಸ್ಥಳದಲ್ಲೂ ಕುರ್ಚಿ ವ್ಯವಸ್ಥೆ ಮಾಡಲಾಗಿಲ್ಲ. ವಿಶೇಷವಾಗಿ ರೈಲುಗಳು 25 ರಿಂದ 30 ನಿಮಿಷಗಳ ಅಂತರದಲ್ಲಿ ಸಂಚರಿಸುವುದರಿಂದ ಪ್ರಯಾಣಿಕರು ಹೆಚ್ಚು ಹೊತ್ತು ನಿಂತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಹಿರಿಯ ನಾಗರಿಕರಿಗೆ, ಮಕ್ಕಳಿಗೆ ತೊಂದರೆ:
ಹಿರಿಯ ನಾಗರಿಕರು, ಮಕ್ಕಳೊಂದಿಗೆ ಬರುವ ಪೋಷಕರು ಹಾಗೂ ವಿದ್ಯಾರ್ಥಿಗಳು ಇದರಿಂದ ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ. ಟಿಕೆಟ್ ದರವನ್ನು ಮಾತ್ರ ಹೆಚ್ಚಿಸುತ್ತಾರೆ, ಆದರೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕನಿಷ್ಠ ಕುಳಿತುಕೊಳ್ಳಲು ಒಂದು ಕುರ್ಚಿಯೂ ಇಲ್ಲ ಎಂದು ಪ್ರಯಾಣಿಕ ರಾಜೇಶ್ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ.
ಪ್ರಯಾಣಿಕರ ಅನುಭವಗಳನ್ನು ಗಮನಿಸಿದರೆ, ಹಳದಿ ಮಾರ್ಗದ ಪ್ರತಿಯೊಂದು ನಿಲ್ದಾಣದಲ್ಲೂ ಕುಳಿತುಕೊಳ್ಳುವ ವ್ಯವಸ್ಥೆ ತಕ್ಷಣ ಮಾಡಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಜೋರಾಗುತ್ತಿದೆ.
ಹಳದಿ ಮಾರ್ಗವು ಈಗಾಗಲೇ ಪ್ರಯಾಣಿಕರಿಗೆ ದೊಡ್ಡ ಅನುಕೂಲ ಒದಗಿಸುತ್ತಿದ್ದರೂ, ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಅಸಮಾಧಾನ ಹೆಚ್ಚಾಗಿದೆ. ಪ್ರಯಾಣಿಕರು ಹೆಚ್ಚು ಸಮಯ ಕಾಯಬೇಕಾದ ಸಂದರ್ಭಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಅತೀ ಮುಖ್ಯ. ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಇರುವಂತೆ, ಹಳದಿ ಮಾರ್ಗದಲ್ಲೂ ಸಮರ್ಪಕ ಸೌಲಭ್ಯ ಕಲ್ಪಿಸಿದರೆ ಮಾತ್ರ ಜನರಿಗೆ ನಿಜವಾದ ಅರ್ಥದಲ್ಲಿ ಸುಗಮ ಸಂಚಾರ ಸಾಧ್ಯವಾಗುತ್ತದೆ. ನಾಗರಿಕರು ಭರವಸೆ ಇಟ್ಟಿರುವಂತೆ, ಬಿಎಮ್‌ಆರ್‌ಸಿಎಲ್ ಶೀಘ್ರ ಕ್ರಮ ಕೈಗೊಂಡು ಎಲ್ಲಾ ನಿಲ್ದಾಣಗಳಲ್ಲಿ ಕುರ್ಚಿ ಹಾಗೂ ಇತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದರೆ ಪ್ರಯಾಣಿಕರ ತೊಂದರೆ ಕಡಿಮೆಯಾಗುವುದು ಮಾತ್ರವಲ್ಲ, ಮೆಟ್ರೋ ಸೇವೆಗಳ ಮೇಲಿನ ವಿಶ್ವಾಸವೂ ಹೆಚ್ಚಾಗಲಿದೆ.