ಬಳ್ಳಾರಿಯಲ್ಲಿ ಶೂಟೌಟ್ ಹೈಡ್ರಾಮಾ: “ನನ್ನ ಹತ್ಯೆಗೆ ನಾರಾ ಭರತ್ ರೆಡ್ಡಿ ಸಂಚು” – ಬುಲೆಟ್ ತೋರಿಸಿ ಜನಾರ್ದನ ರೆಡ್ಡಿ ಗಂಭೀರ ಆರೋಪ!

ಬಳ್ಳಾರಿ: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ನನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಗಂಗಾವತಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ(Janardhana Reddy) ಗಂಭೀರ ಆರೋಪ ಮಾಡಿದ್ದಾರೆ.


ತನ್ನ ಮನೆಯ ಮುಂದೆ ನಡೆದ ಗಲಾಟೆ ವಿಚಾರಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ನನ್ನ ಕ್ಷೇತ್ರದ ಕೆಲಸಕ್ಕೆ ಹೋಗಿದ್ದೆ. ನಾನು ಇಲ್ಲದ ಸಮಯದಲ್ಲಿ ಭರತ್ ರೆಡ್ಡಿ ಬೆಂಬಲಿಗರು ಮನೆಯ ಮುಂದೆ ಕುರ್ಚಿ ಹಾಕಿ ಗಲಾಟೆ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ನಾನು ಶ್ರೀರಾಮುಲು ಅವರಿಗೆ ತಿಳಿಸಿದ್ದೆ. ಅವರು ಪೊಲೀಸರ ಸಮ್ಮುಖದಲ್ಲೇ ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ ಎಂದು ದೂರಿದರು.

ನಾನು ಕಾರಿನಿಂದ ಬಂದು ಇಳಿದ ಕೂಡಲೇ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ನಾಲ್ಕಾರ್ ರೌಂಡ್ ಫೈರ್ ಮಾಡಿದ್ದಾರೆ. ನನ್ನ ಹತ್ಯೆ ಮಾಡಲೆಂದೇ ಇಲ್ಲಿ ಗಲಾಟೆ ಮಾಡಿದ್ದಾರೆ ಎಂದು ದೂರಿ ಫೈರ್ ಮಾಡಿದ ಬುಲೆಟ್ ಅನ್ನು ಪ್ರದರ್ಶಿಸಿದರು.

ವಾಲ್ಮೀಕಿ ಪುತ್ಥಳಿ ಪ್ರತಿಷ್ಟಾಪನೆ ಹೆಸರಲ್ಲಿ ನಾರಾ ಭರತ್ ರೆಡ್ಡಿ ಊರಿಗೆ ಬೆಂಕಿ ಹಚ್ಚಲು ಹೊರಟಿದ್ದಾರೆ. ಕೊಲೆಗೆಡುಕರನ್ನ ಹಿಂದಿಟ್ಟುಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾರೆ. ನಾರಾ ಭರತ್ ರೆಡ್ಡಿ ಯಾವುದೇ ಕೆಲಸ ಮಾಡಿಲ್ಲ. ನಾನು ಬಳ್ಳಾರಿಗೆ ಬಂದರೆ ಕಾಂಗ್ರೆಸ್ ಪಕ್ಷ ಸೋಲಾಗುತ್ತದೆ ಎಂಬ ಕಾರಣಕ್ಕೆ ಗಲಾಟೆ ಮಾಡುತ್ತಿದ್ದಾರೆ.