ಸಿರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್

ಆಸ್ಪತ್ರೆ ಆವರಣದೊಳಗೆ (Syria Hospital) ನುಗ್ಗಿದ ಶಸ್ತ್ರಸಜ್ಜಿತ ಗುಂಪೊಂದು ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಸಿರಿಯಾದಲ್ಲಿ (Syria) ನಡೆದಿದೆ. ಇದರ ವಿಡಿಯೊವನ್ನು ಚಿತ್ರೀಕರಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ (Viral Video) ಆಗಿದೆ.

ಇದರಲ್ಲಿ ಆಸ್ಪತ್ರೆ (Sweida National Hospital) ಸಿಬ್ಬಂದಿ ಮಂಡಿಯೂರಿ ಕುಳಿತಿದ್ದು, ಆಗ ಶಸ್ತ್ರಸಜ್ಜಿತವಾಗಿರುವ ಗುಂಪು ಬಂದೂಕು ಹಿಡಿದು ಮಂಡಿಯೂರಿ ಕುಳಿತವರ ಮೇಲೆ ಗುಂಡು ಹಾರಿಸಿದೆ. ಆಸ್ಪತ್ರೆ ಸಿಬ್ಬಂದಿ ಒಬ್ಬೊಬ್ಬರಾಗಿ ನೆಲದ ಮೇಲೆ ಉರುಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ (Syrian Observatory for Human Rights) ಈ ವಿಡಿಯೊವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದಿನಾಂಕವಿಲ್ಲ. ಹೀಗಾಗಿ ಈ ಘಟನೆ ಯಾವಾಗ ನಡೆದಿರುವುದು ಎನ್ನುವುದು ಸ್ಪಷ್ಟವಾಗಿಲ್ಲ. ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್ -ಶರಾ ಅವರ ಸರ್ಕಾರಕ್ಕೆ ನಿಷ್ಠರಾಗಿರುವ ಕೆಲವು ಮಂದಿ ಆಸ್ಪತ್ರೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿದೆ ಎಂದು ರಷ್ಯಾ ಮಾಧ್ಯಮವೊಂದು ವರದಿ ಮಾಡಿದೆ.
ಸ್ವೀಡಾ ರಾಷ್ಟ್ರೀಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯ ಸಮವಸ್ತ್ರ ಧರಿಸಿದ ಸಿಬ್ಬಂದಿ ಮೇಲೆ ಪುರುಷರ ದೊಡ್ಡ ಗುಂಪೊಂದು ದಾಳಿ ಮಾಡಿದೆ. ದಾಳಿ ಮಾಡಿರುವವರನ್ನು ಸಿರಿಯನ್ ರಕ್ಷಣಾ ಮತ್ತು ಆಂತರಿಕ ಸಚಿವಾಲಯಗಳ ಸದಸ್ಯರು ಎನ್ನಲಾಗಿದೆ.
ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಆಸ್ಪತ್ರೆ ಸಿಬ್ಬಂದಿಯ ಮುಖಕ್ಕೆ ಹೊಡೆಡಿದ್ದು, ಬಳಿಕ ಹೊಂಡಕ್ಕೆ ತಳ್ಳಿ ಅವನ ಮೇಲೆ ಎರಡು ಬಾರಿ ಗುಂಡು ಹಾರಿಸಲಾಗುತ್ತದೆ. ಅನಂತರ ಹಲವಾರು ಮಂದಿಯ ಮೇಲೆ ಗುಂಡು ಹರಿಸಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಸ್ವೀಡಾ ನಗರದಲ್ಲಿ ಡ್ರೂಜ್ ಹೋರಾಟಗಾರರು ಮತ್ತು ಸುನ್ನಿ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವೆ ತೀವ್ರ ಘರ್ಷಣೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕದನ ವಿರಾಮವನ್ನು ಜಾರಿಗೆ ತರಲು ಸಿರಿಯನ್ ರಾಜಧಾನಿ ಡಮಾಸ್ಕಸ್‌ನಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಸ್ವೀಡಾವನ್ನು ಪ್ರವೇಶಿಸಿದ ಸರ್ಕಾರಿ ಪಡೆಗಳು ಬೆಡೋಯಿನ್ ಬಣಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 70,000ಕ್ಕೂ ಹೆಚ್ಚು ಜನರಿರುವ ಸ್ವೀಡಾ ಪ್ರಾಂತ್ಯದ ಆಡಳಿತ ಕೇಂದ್ರವಾದ ಸ್ವೀಡಾ ಮತ್ತು ಸುತ್ತಮುತ್ತಲಿನ ಪ್ರದೇಶದ ಹಲವಾರು ಹಳ್ಳಿಗಳನ್ನು ಸರ್ಕಾರ ವಶಕ್ಕೆ ಪಡೆದಿದ್ದರೂ ಇದು ಇನ್ನೂ ಕೂಡ ಡ್ರೂಜ್ ಪಡೆಗಳ ಸಂಪೂರ್ಣ ನಿಯಂತ್ರಣದಲ್ಲಿದೆ.
ಸಿರಿಯಾದ ಡ್ರೂಜ್ ಸಮುದಾಯದ ಆಧ್ಯಾತ್ಮಿಕ ನಾಯಕ ಶೇಖ್ ಹಿಕ್ಮತ್ ಅಲ್-ಹಿಜ್ರಿ ಅವರು ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಸ್ವೀಡಾ ಹಿಂಸಾಚಾರದ ಬಗ್ಗೆ ಅಂತಾರಾಷ್ಟ್ರೀಯ ತನಿಖೆಗೆ ಕರೆ ನೀಡಿದ್ದಾರೆ.
ಇಸ್ರೇಲ್‌ನಲ್ಲಿ ಅಲ್ಪಸಂಖ್ಯಾತರಾಗಿರುವ ಡ್ರೂಜ್ ನ ಅನೇಕರು ಅದರ ಮಿಲಿಟರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುದ್ಧ ಪ್ರಾರಂಭವಾದಾಗಿನಿಂದ ಸಿರಿಯಾದ ದಕ್ಷಿಣದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಅಪರೂಪ ಎಂಬಂತೆ ಇಸ್ರೇಲ್ ಹಸ್ತಕ್ಷೇಪ ನಡೆಸಿದೆ. ತಮ್ಮ ಸಮುದಾಯದ ಮೇಲೆ ವ್ಯಾಪಕ ಪ್ರಮಾಣದ ಹತ್ಯಾಕಾಂಡವನ್ನು ತಡೆಯುವಲ್ಲಿ ಇಸ್ರೇಲ್ ಪ್ರಮುಖ ಪಾತ್ರ ವಹಿಸಿವೆ ಎಂದು ಡ್ರೂಜ್ ನಾಯಕರು ಹೇಳಿದ್ದಾರೆ