ಪುಣೆಯಲ್ಲಿ ಆಘಾತಕಾರಿ ಘಟನೆ: ಇಂಜಿನಿಯರ್ ಪಿಯೂಷ್ ಕವಡೆ ಕಚೇರಿಯಿಂದ ಹಾರಿ ಆತ್ಮಹತ್ಯೆ!

ಪುಣೆ: 23 ವರ್ಷದ ಇಂಜಿನಿಯರ್ ಓರ್ವ ಕಚೇರಿಯಲ್ಲಿ ನಡೆಯುತ್ತಿದ್ದ ಮೀಟಿಂಗ್‌ನಿಂದ ಅರ್ಧದಲ್ಲೇ ಹೊರಗೆ ಬಂದವನೇ ಸೀದಾ ಸಂಸ್ಥೆಯ ಮೇಲ್ಛಾವಣಿಗೆ ಹೋಗಿ ಕಟ್ಟಡದಿಂದ ಹಾರಿ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ಯುವಕನನ್ನು 23 ವರ್ಷ ಪಿಯೂಷ್ ಅಶೋಕ್ ಕವಡೆ ಎಂದು ಗುರುತಿಸಲಾಗಿದೆ.

ಈತ ಕಳೆದ ವರ್ಷ ಜುಲೈನಿಂದ ಪುಣೆಯ ಹಿಂಜೆವಾಡಿಯ ಐಟಿ ಹಬ್‌ನಲ್ಲಿರುವ ಅಟ್ಲಾಸ್ ಕೊಪ್ಕೊ(ಇಂಡಿಯಾ)ದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ.
ಬೆಳಗ್ಗೆ 9.30ಕ್ಕೆ ಆತ ಕಟ್ಟಡದಿಂದ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದು, ತನ್ನ ಕುಟುಂಬಕ್ಕಾಗಿ ಪತ್ರವೊಂದನ್ನು ಬರೆದಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಯುವಕನಿಗೇನಾದರು ಕೆಲಸದ ಒತ್ತಡವಿತ್ತ ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಪುಣೆಯ ಅಸಿಸ್ಟೆಂಟ್ ಪೊಲೀಸ್ ಕಮೀಷನರ್ ಸುನೀಲ್ ಕುರ್ದೆ, ಮೊದಲ ನೋಟದಲ್ಲಿ, ಅಂತಹ ಲಕ್ಷಣಗಳು ಕಂಡು ಬಂದಿಲ್ಲ ತನಿಖೆ ನಡೆಯುತ್ತಿದೆ, ಆದರೆ ಇನ್ನೂ ಅವರು ಡೆತ್‌ನೋಟ್‌ನಲ್ಲಿ ಬರೆದಿರುವುದನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ.
ಮೂಲತಃ ಮಹಾರಾಷ್ಟ್ರದ ನಾಸಿಕ್‌ನವನಾದ ಈತ ತನ್ನ ಸಂಸ್ಥೆಯ ಕಟ್ಟಡದ 7ನೇ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಾನೆ. ಮೀಟಿಂಗ್‌ನಿಂದ ಹೊರ ಹೋಗುವ ವೇಳೆ ಆತ ಎದೆನೋವಿನ ಕಾರಣ ನೀಡಿದ್ದ ಎಂಬುದು ತಿಳಿದು ಬಂದಿದೆ. ಘಟನೆಯಿಂದ ಪಿಯೂಷ್ ಸಹೋದ್ಯೋಗಿಗಳು, ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.
ಡೆತ್‌ನೋಟ್‌ನಲ್ಲಿ ಪಿಯೂಷ್ ಜೀವನದಲ್ಲಿನ ಸೋಲಿನ ಬಗ್ಗೆತೀವ್ರ ವಿಷಾದ ವ್ಯಕ್ತಪಡಿಸಿದ್ದಾನೆ. ನಾನು ಜೀವನದಲ್ಲಿ ಎಲ್ಲೆಡೆ ವಿಫಲನಾಗಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಬರೆದಿರುವ ಆತ, ತಮ್ಮ ತಂದೆಗೆ ಬರೆದ ಸಂದೇಶದಲ್ಲಿ, ನಾನು ತಮ್ಮ ಮಗನಾಗಲು ಅರ್ಹರಲ್ಲ, ನನ್ನ ಕೃತ್ಯಗಳಿಗೆ ಕ್ಷಮೆಯಾಚಿಸುವುದಾಗಿ ಆತ ಬರೆದುಕೊಂಡಿದ್ದಾನೆ. ಕೊನೆಯ ಪತ್ರದಲ್ಲಿ ಆತ ಸಂಪೂರ್ಣವಾಗಿ ಕುಟುಂಬ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಭಾವುಕನಾಗಿದ್ದಾನೆ. ಆತನ ಸಾವಿಗೆ ಯಾವುದೇ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಅಥವಾ ವೃತ್ತಿಪರ ಸಮಸ್ಯೆಗಳು ಕಾರಣವೆಂದು ಎಲ್ಲೂ ಆತ ಉಲ್ಲೇಖಿಸಿಲ್ಲ.
