ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ: ಇಬ್ಬರು ವಾಸಿಸುವ ಬಾಡಿಗೆ ಮನೆಗೆ ₹15,800 ವಾಟರ್ ಬಿಲ್!

ಬೆಂಗಳೂರು: ನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ಒಂದು ತಿಂಗಳಿಗೆ ಬರೋಬ್ಬರಿ 15,800 ರೂ ವಾಟರ್ ಬಿಲ್ ಬಂದಿದ್ದು ನೋಡಿ ಶಾಕ್ ಆಗಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ವಿಷಾದ ವ್ಯಕ್ತಪಡಿಸಿದ್ದು, ಸದ್ಯ ಭಾರೀ ವೈರಲ್ ಆಗುತ್ತಿದೆ.

ರೆಡ್ಡಿಟ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬೆಂಗಳೂರು ಮೂಲದ ವ್ಯಕ್ತಿ ಪ್ರಕಾರ, ನನ್ನ ಮನೆ ಮಾಲೀಕರು ಪ್ರತಿ ತಿಂಗಳು ಹೆಚ್ಚು ಹೆಚ್ಚು ವಾಟರ್ ಬಿಲ್ ಬರುತ್ತಿರುವುದಕ್ಕೆ ನನ್ನನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ 165,000 ಲೀಟರ್ ನೀರಿಗೆ ಸುಮಾರು 15,800 ರೂ. ಬಿಲ್ ಹಂಚಿಕೊಂಡಿದ್ದಾರೆ.
ನಮಗೆ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 10 ಸಾವಿರ ರೂ ನೀರಿನ ಬಿಲ್ ಬರುತ್ತದೆ. ನಾವು ವಾಸಿಸುತ್ತಿರುವುದು ಕೇವಲ ಇಬ್ಬರು ಮಾತ್ರ. ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಕಳೆಯುತ್ತೇವೆ ಎಂದು ವ್ಯಕ್ತಿ ಹೇಳಿದ್ದಾರೆ.
ಈ ವಿಚಾರವಾಗಿ ನಾನು ಮನೆಯ ಮಾಲೀಕರೊಂದಿಗೆ ಜಗಳಕ್ಕಿಳಿದೆ. ಆದರೆ ಅವರು ಇಲ್ಲಸಲ್ಲದ ನೆಪಗಳನ್ನು ಹೇಳುತ್ತಾರೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ನಮಗೆ ಒಂದು ಅಥವಾ ಎರಡು ದಿನ ನೀರು ಸಿಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾ ವೈರಲ್ ಆಗಿದ್ದು, ಹಲ್ಚಲ್ ಸೃಷ್ಟಿಸಿದೆ. ನೀರಿನ ಬಿಲ್ ಇಷ್ಟೊಂದು ಹೆಚ್ಚಾಗಲು ಸಾಧ್ಯವಿಲ್ಲ, ಮೀಟರ್ ಸಂಪರ್ಕವನ್ನು ಪರಿಶೀಲಿಸುವಂತೆ ವ್ಯಕ್ತಿಯನ್ನು ಒತ್ತಾಯಿಸಿಲಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ನೀರನ್ನು ಬಳಕೆ ಮಾಡಿರಬಹುದು. ಹಾಗಾಗಿ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೆ ಕೆಲವರು ಸಲಹೆ ನೀಡಿದ್ದಾರೆ.
ಇದು ನಿಜಕ್ಕೂ ಅಸಾಧ್ಯ, ಮೀಟರ್‌ಗೆ ನಿರಂತರವಾಗಿ ಗಾಳಿ ಹರಿಯುತ್ತಿರಬಹುದು ಅಥವಾ ಮೀಟರ್ನಲ್ಲಿ ಏನೋ ದೋಷ ಉಂಟಾಗಿರಬಹುದು. ಇಬ್ಬರು ವ್ಯಕ್ತಿಗಳಿಗೆ ಗರಿಷ್ಠ ಬಿಲ್ 300 ದಾಟಬಾರದು. ನಾಲ್ಕು ಸದಸ್ಯರ ಕುಟುಂಬಗಳಿಗೂ ಅಷ್ಟು ಹೆಚ್ಚು ಬಿಲ್ ಬರುವುದಿಲ್ಲ, ಏನೋ ತಪ್ಪಾಗಿದೆ. ನಿಮ್ಮ ನೆರೆಹೊರೆಯವರು ಅಥವಾ ಪಕ್ಕದ ಮನೆಯ ಜನರೊಂದಿಗೆ ಮಾತನಾಡಿ ಅವರ ನೀರಿನ ಬಿಲ್‌ಗಳು ಎಷ್ಟು ಬರುತ್ತಿದೆ ವಿಚಾರಿಸುವಂತೆ ನೆಟ್ಟಿಗರು ಹೇಳಿದ್ದಾರೆ.