ಬಿಜೆಪಿಗೆ ಅಣ್ಣಾಮಲೈ ಶಾಕ್: ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ!

ಚೆನೈ (ತಮಿಳುನಾಡು): ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಗೆ (Assembly Elections) ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿಗೆ (BJP) ಅತಿ ದೊಡ್ಡ ಶಾಕ್ ಎದುರಾಗಿದ್ದು, ಮಹತ್ವದ ಜವಾಬ್ದಾರಿಗೆ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (Annamalai) ರಾಜೀನಾಮೆ ನೀಡಿದ್ದಾರೆ.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು (Tamil Nadu Assembly Elections) ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಜ್ಯದ ಎಲ್ಲಾ 234 ಕ್ಷೇತ್ರಗಳಲ್ಲಿ ಸಂಘಟನಾ ಪ್ರವಾಸ ಹಾಗೂ ಪ್ರಚಾರ ಕಾರ್ಯಕ್ಕೆ ಯೋಜನೆ ರೂಪಿಸಿತ್ತು. ಈ ಯೋಜನೆಯ ಭಾಗವಾಗಿ ಪಕ್ಷದ ಪ್ರಮುಖ ನಾಯಕರಾದ ಎಲ್. ಮುರುಗನ್, ಪೊನ್. ರಾಧಾಕೃಷ್ಣನ್, ತಮಿಳಿಸೈ ಸೌಂದರರಾಜನ್, ಎಚ್. ರಾಜಾ ಸೇರಿದಂತೆ ಹಲವರಿಗೆ ತಲಾ ನಾಲ್ಕು ರಿಂದ ಆರು ಕ್ಷೇತ್ರಗಳ ಉಸ್ತುವಾರಿ ನೀಡಲಾಗಿತ್ತು. ಅದೇ ರೀತಿ ಅಣ್ಣಾಮಲೈ ಅವರನ್ನು ಸಿಂಗನಲ್ಲೂರು, ಮಧುರೈ ದಕ್ಷಿಣ, ವಿರುಗಂಬಕ್ಕಂ, ಕಾರೈಕುಡಿ, ಶ್ರೀವೈಕುಂಡಂ ಮತ್ತು ಪದ್ಮನಾಭಪುರಂ ಎಂಬ ಆರು ಕ್ಷೇತ್ರಗಳ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಆದರೆ, ಈ ನೇಮಕಕ್ಕೆ ಸಿಂಗಂ ಖ್ಯಾತಿಯ ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಹಿಂದಿನ ಕಾರಣವೇನು?
ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ತಮ್ಮ ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಬೇಕಾಗಿದೆ. ಹಾಗಾಗಿ, ಮುಂಬರುವ ವಿಧಾನಸಭಾ ಚುನಾವಣೆಯ ಕ್ಷೇತ್ರ ಉಸ್ತುವಾರಿ ಕರ್ತವ್ಯಗಳನ್ನು ನಿರ್ವಹಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರಿಗೆ ಈಗಾಗಲೇ ಮಾಹಿತಿ ನೀಡಿರುವುದಾಗಿ ತಿಳಿಸಿದ ಅವರು, ತಮ್ಮ ನಿರ್ಧಾರವು ಸಂಪೂರ್ಣವಾಗಿ ವೈಯಕ್ತಿಕವಾಗಿದೆ ಎಂದು ಸ್ಪಷ್ಟಪಡಿಸಿದರು.

ಡಿಎಂಕೆ’! ನಿರ್ಮಲಾ ಸೀತಾರಾಮನ್ ನೇರಮಾತು
ಮುಂದುವರೆದು, ಪಕ್ಷ ಕೇಳಿದರೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಾಗಿ ಸ್ಪಷ್ಟಪಡಿಸಿದ ಅಣ್ಣಾಮಲೈ, ನಿರಂತರವಾಗಿ ಕ್ಷೇತ್ರ ಉಸ್ತುವಾರಿ ವಹಿಸಿ ಸಂಘಟನಾ ಕೆಲಸ ನಡೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಏತನ್ಮಧ್ಯೆ, ಬಿಜೆಪಿ ಕಾರ್ಯಕರ್ತರೊಂದಿಗೆ ತಮ್ಮ ಸಂಬಂಧ ಸದಾ ಮುಂದುವರಿಯುತ್ತದೆ ಹಾಗೂ ಪಕ್ಷದ ಬೆಳವಣಿಗೆಗೆ ಸದಾ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ಚುನಾವಣಾ ಸ್ಪರ್ಧೆಗೆ ಹಿಂದೇಟು?
ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಅಣ್ಣಾಮಲೈ ಅವರು, ತಮಿಳುನಾಡು ಬಿಜೆಪಿಗೆ ಹೊಸ ಭರವಸೆಯಾಗಿದ್ದರು. ಆದರೆ, ಎಐಎಡಿಎಂಕೆಯೊಂದಿಗಿನ ಮೈತ್ರಿ ಕಾರಣದಿಂದ ಅಣ್ಣಾಮಲೈ ಅವರು, ಕಳೆದ ವರ್ಷ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ಇಂದು, ಅಣ್ಣಾಮಲೈ ಅವರು, ಪಕ್ಷದ ಚುನಾವಣಾ ಉಸ್ತುವಾರಿ ಹುದ್ದೆಗೂ ರಾಜೀನಾಮೆ ನೀಡಿದ್ದಾರೆ. ಇದು ಈಗಾಗಲೇ ಬಿಜೆಪಿಗೆ ವ್ಯತಿರಿಕ್ತವಾಗಿದೆ.

ಇದರ ನಡುವೆ, ಇಂದು ಅಣ್ಣಾಮಲೈ ಅವರು, “ಮುಂಬರುವ ಚುನಾವಣೆಯಲ್ಲಿ ತಾವು ಸ್ಪರ್ಧಿಸಬೇಕೇ ಬೇಡವೇ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ” ಎಂದು ತಿಳಿಸಿದರು.
ಬಿಜೆಪಿಗೆ ಎದುರಾದ ಹೊಸ ಸವಾಲು
ಅಣ್ಣಾಮಲೈ ತಮಿಳುನಾಡು ಬಿಜೆಪಿಯ ಪ್ರಮುಖ ಮುಖವಾಗಿದ್ದು, ಯುವ ಮತದಾರರ ಮೇಲೆ ಪ್ರಭಾವ ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಉಸ್ತುವಾರಿ ಹುದ್ದೆಯಿಂದ ಹಿಂದೆ ಸರಿದಿರುವುದು ಪಕ್ಷಕ್ಕೆ ಹೊಸ ತಂತ್ರ ರೂಪಿಸುವ ಅನಿವಾರ್ಯತೆ ತಂದಿದ್ದು, ಇದನ್ನು ಬಿಜೆಪಿ ಹೇಗೆ ಎದುರಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ