ಅಮೇರಿಕಾ ಕನಸು ಕಂಡ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ದಿಗಿಲು

ದೂರದ ಬೆಟ್ಟ ಕಣ್ಣಿಗೆ ನುಣ್ಣನೆ…ಅಮೆರಿಕದ ಕನಸು ಕಂಡು ಅಲ್ಲಿನ ಅವಕಾಶಗಳ ಬೆನ್ನತ್ತಿ ಹೋಗಿರುವ ಹಲವು ಭಾರತೀಯ ವಿದ್ಯಾರ್ಥಿಗಳಿಗೆ ಈಗ ಅಮೆರಿಕ ದಿಗಿಲು ಬಡಿಸಿದೆ. ವೀಸಾ ನಿಯಮಗಳು ಕತ್ತು ಹಿಸುಕುತ್ತಿವೆ, ಓದುತ್ತಲೇ ಮಾಡುತ್ತಿದ್ದ ಏಳೆಂಟು ತಾಸು ಉದ್ಯೋಗಕ್ಕೆ ಬ್ರೇಕ್ ಬಿದ್ದಿದೆ, ದಿನ ನಿತ್ಯದ ಖರ್ಚು-ವೆಚ್ಚಗಳು, ಬಾಡಿಗೆ, ಎಲ್ಲವನ್ನೂ ನಿಭಾಯಿಸೋಕೆ ಆಗದೆ ಹಲವು ವಿದ್ಯಾರ್ಥಿಗಳು ತತ್ತರಿಸಿ ಹೋಗಿದ್ದಾರೆ.

ಇನ್ನೂ ಕೋರ್ಸ್ ಮುಗಿಯುತ್ತಲೇ ಆಪ್ಷನಲ್ ಪ್ರ್ಯಾಕ್ಟಿಕಲ್ ಟ್ರೈನಿಂಗ್ (ಒಪಿಟಿ) ಅವಕಾಶಗಳು ಸಿಗುವ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಈ ಮಧ್ಯೆ ವಿದ್ಯಾರ್ಥಿಗಳು ಕೆಲಸ ಮತ್ತು ಉದ್ಯೋಗ ಎರಡನ್ನೂ ಬ್ಯಾಲೆನ್ಸ್ ಮಾಡೋಕೆ ಸಾಧ್ಯವಾಗದೆ, ಸರಿಯಾಗಿ ಹಾಜರಾತಿ ನಿರ್ವಹಿಸೋಕೆ ಸಾಧ್ಯವಾಗದೆ, ಅದೇ ಕಾರಣದಿಂದ ವಿದ್ಯಾರ್ಥಿ ವೀಸಾ ರದ್ದು ಆಗಿರುವ ಉದಾಹರಣೆಗಳು ಎದುರಾಗುತ್ತಿವೆ.
ಪದವಿ ಶಿಕ್ಷಣಕ್ಕೆ ಅಥವಾ ಮಾಸ್ಟರ್ ಡಿಗ್ರಿ ಮಾಡೋಕೆ ಅಮೆರಿಕಕ್ಕೆ ಹೋಗುವಾಗಲೇ ವಿದ್ಯಾರ್ಥಿಗಳು ಮುಂದಾಲೋಚನೆ ಮಾಡುವುದು ಅತ್ಯಗತ್ಯ. ತಮ್ಮ ಆರ್ಥಿಕ ಸ್ಥಿತಿಯು ಅಮೆರಿಕದ ಓದು ಮತ್ತು ಜೀವನವನ್ನು ಸರಿದೂಗಿಸುವಂತೆ ಇದೆಯಾ, ಬ್ಯಾಂಕ್‌ನಲ್ಲಿ ಸಾಲ ಮಾಡಿ ಕೋರ್ಸ್ ಶುಲ್ಕ ಕಟ್ಟಿದರೂ, ಅಲ್ಲಿನ ಹಾಸ್ಟೆಲ್ ಅಥವಾ ಮನೆ ಬಾಡಿಗೆ ಮತ್ತು ಊಟ-ತಿಂಡಿ ಸೇರಿದಂತೆ ಇತರೆ ಖರ್ಚುಗಳಿಗೆ ಸಾಕಷ್ಟು ಮೊತ್ತದ ಸಂಗ್ರಹ ಬ್ಯಾಂಕ್ ಖಾತೆಯಲ್ಲಿ ಇದೆಯಾ? ತುರ್ತು ಪರಿಸ್ಥಿತಿ ಎದುರಾದರೆ ಏನು ಮಾಡಬೇಕು, ಶಿಕ್ಷಣ ಮುಗಿದ ಮೇಲೆ ಒಪಿಟಿ ಅಡಿಯಲ್ಲಿ ತರಬೇತಿಗೆ ಅವಕಾಶ ಸಿಗಲಿಲ್ಲ ಅಂದ್ರೆ ಮಾಡೋದೇನು, ಉದ್ಯೋಗ ಹುಡುಕುವಷ್ಟು ವೀಸಾ ಅನುಮತಿ ಸಿಗದೇ ಹೋದರೆ ಮುಂದೇನು, ಇಂಥ ಎಲ್ಲ ಪ್ರಶ್ನೆಗಳಿಗೂ ಉತ್ತರ ಗೊತ್ತಿರಬೇಕು. ಇಲ್ಲವೇ ಏನೇ ತೊಂದರೆ ಆದರೂ ದೇಶಕ್ಕೆ ವಾಪಸ್ ಬಂದು ಮುಂದಿನ ದಾರಿ ಹುಡುಕುತ್ತೇನೆ ಎಂಬ ಗಟ್ಟಿ ಮನಸ್ಸು ಮಾಡಿಕೊಂಡಿರಬೇಕು. ಆದರೆ, ಭಾರತೀಯ ವಿದ್ಯಾರ್ಥಿಗಳು ಈಗ ಅಮೆರಿಕದಲ್ಲಿ ಸಂಕಷ್ಟಕ್ಕೆ ಒಳಗಾಗುತ್ತಿರುವುದಕ್ಕೆ ಮುಖ್ಯವಾಗಿ ಏನು ಕಾರಣ ಎಂಬ ಬಗ್ಗೆ ಇಲ್ಲಿ ಗಮನಿಸೋಣ.
ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆ ವರದಿಯ ಪ್ರಕಾರ, ಕಟ್ಟುನಿಟ್ಟಾದ ವೀಸಾ ನಿಯಮಗಳು ಜಾರಿಯಾಗುತ್ತಿರುವುದು, ಅದರ ಜೊತೆಗೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿರುವುದು, ಜೀವನ ವೆಚ್ಚಗಳನ್ನು ನಿರ್ವಹಿಸುವುದೇ ಕಷ್ಟಕರ ಆಗುತ್ತಿರುವುದು ಗಂಭೀರ ಬೆಳವಣಿಗೆಯಾಗಿದೆ. ಅನೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಪರದಾಡುತ್ತಿದ್ದಾರೆ. ಬದುಕು ಸಾಗಿಸಲು ಖರ್ಚುಗಳನ್ನು ಕಡಿಮೆ ಮಾಡುತ್ತಿದ್ದಾರೆ, ಒಂದೇ ವಸತಿಯಲ್ಲಿ ಹೆಚ್ಚೆಚ್ಚು ಜನರು ವಾಸಿಸೋಕೆ ಶುರು ಮಾಡಿದ್ದಾರೆ.
ಕಾಲೇಜಿಗೆ ಚಕ್ಕರ್, ಸಾವಿರಾರು ವಿದ್ಯಾರ್ಥಿಗಳ ವೀಸಾ ರದ್ದು!
ವಿದ್ಯಾರ್ಥಿಗಳ ವೀಸಾ ನಿಯಮಗಳು ದಿನದಿಂದ ದಿನಕ್ಕೆ ಕಠಿಣ ಆಗುತ್ತಿವೆ. ವೀಸಾ ಇಂಟರ್ವ್ಯೂ, ಸ್ಲಾಟ್ ಬುಕ್ಕಿಂಗ್‌ನಲ್ಲೇ ಭಾರತೀಯರಿಗೆ ಕಾಯುವಿಕೆ ಅವಧಿಯು ಜಾಸ್ತಿಯಾಗುತ್ತಿದೆ. ಇನ್ನು ವೀಸಾ ತಗೊಂಡು ಅಮೆರಿಕಕ್ಕೆ ಬಂದ ಮೇಲೆ ವಾಸ್ತವದ ಪರಿಸ್ಥಿತಿ ಕಬ್ಬಿಣದ ಕಡಲೆ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯಾರ್ಥಿಯು ಏನೆಲ್ಲಾ ಹಂಚಿಕೊಳ್ಳುತ್ತಿದ್ದಾರೆ, ಅಮೆರಿಕದ ಬಗ್ಗೆ ಯಾವ ಧೋರಣೆ ಹೊಂದಿದ್ದಾರೆ, ಯಹೂದಿಗಳು ಮತ್ತು ಪ್ಯಾಲೆಸ್ತೀನ್ ಕುರಿತು ಯಾವ ನಿಲುವು ಹೊಂದಿದ್ದಾರೆ, ಎಂಬ ವಿಚಾರಗಳೆಲ್ಲವೂ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತಿವೆ. ಪ್ರತಿಭಟನೆಗಳು, ಹೋರಾಟಗಳಲ್ಲಿ ಭಾಗಿಯಾಗಿರುವವರನ್ನು ಹುಡುಕಿ ವಿಚಾರಣೆಗೆ ಒಳಪಡಿಸುವ ಅಥವಾ ವೀಸಾ ರದ್ದು ಮಾಡಿ ಗಡಿಪಾರು ಮಾಡುವ ಕ್ರಮಗಳನ್ನು ಅಮೆರಿಕದ ಆಡಳಿತವು ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ವಿದೇಶಿ ವಿದ್ಯಾರ್ಥಿಗಳು ಎಷ್ಟು ಹೊತ್ತು ಕೆಲಸ ಮಾಡಬೇಕು ಅನ್ನೋದರ ಬಗ್ಗೆ ನಿಯಮಗಳು ಕಠಿಣ ಆಗ್ತಿವೆ. ಎಲ್ಲಿ ಮತ್ತು ಎಷ್ಟು ಸಮಯ ಕೆಲಸ ಮಾಡಬೇಕು ಎಂಬ ಬಗ್ಗೆ ನಿಯಮಗಳು ಉಲ್ಲಂಘನೆಯಾಗಿದ್ದರೆ, ಅದರಿಂದ ವಿದ್ಯಾರ್ಥಿಗೆ ಮತ್ತು ಅವರಿಗೆ ಕೆಲಸ ಕೊಟ್ಟಿರುವವರು ಇಬ್ಬರಿಗೂ ತೊಂದರೆ ಕಟ್ಟಿಟ್ಟ ಬುತ್ತಿ!
ಇಂಥದ್ದೇ ಕಾರಣಗಳಿಂದ ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದಾರೆ. ಇತ್ತೀಚೆಗೆ ಕಾಲೇಜು, ಯೂನಿವರ್ಸಿಟಿಯ ತರಗತಿಗಳಲ್ಲಿ ಸರಿಯಾಗಿ ಹಾಜರಾತಿ ಇಲ್ಲದಿರುವುದು, ಹಾಗೇ ಅನಧಿಕೃತವಾಗಿ ಉದ್ಯೋಗ ಮಾಡುತ್ತಿದ್ದ 4,700ಕ್ಕೂ ಹೆಚ್ಚು ವಿದ್ಯಾರ್ಥಿಗಳ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಕೆಲಸ ಸ್ಥಳಗಳಲ್ಲಿ ಅಧಿಕಾರಿಗಳು ಚುರುಕುಗೊಳಿಸಿರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಪಾರ್ಟ್‌ಟೈಂ ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅದರ ನೇರ ಪರಿಣಾಮ ಜೀವನ ನಿರ್ವಹಣೆಯ ಮೇಲೆ ಆಗುತ್ತಿದೆ. ಬಾಡಿಗೆ ಮತ್ತು ನಿತ್ಯ ಖರ್ಚಿಗೆ ಪರಿತಪಿಸುವಂತೆ ಆಗಿದೆ.
ವಿದ್ಯಾರ್ಥಿಗಳೇ ಹೇಳಿಕೊಂಡ ನಿತ್ಯದ ವ್ಯಥೆ!
ಈ ಪರಿಸ್ಥಿತಿಯನ್ನು ನಿಭಾಯಿಸೋಕೆ ವಿದ್ಯಾರ್ಥಿಗಳು ಖರ್ಚುಗಳನ್ನು ಆದಷ್ಟು ಕನಿಷ್ಠ ಮಟ್ಟಕ್ಕೆ ತಂದಿದ್ದಾರೆ, ಹಾಗೇ ಹಣಕಾಸು ಸಹಾಯಕ್ಕಾಗಿ ಕುಟುಂಬದವರನ್ನು ಕೇಳುತ್ತಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ ಮಾಸ್ಟರ್ಸ್ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ಮೊದಲು ರೆಸ್ಟೊರೆಂಟ್‌ನಲ್ಲಿ ಕೆಲಸ ಮತ್ತು ಓದು ಎರಡನ್ನೂ ಸಮವಾಗಿ ನಿಭಾಯಿಸುತ್ತಿದ್ದರು. ದಿನಕ್ಕೆ ಎಂಟು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಆದರೆ, ಪರಿಶೀಲನೆಗಳು ಪ್ರಾರಂಭವಾದ ನಂತರ ಉದ್ಯೋಗದಾತರು ಎಲ್ಲ ವಿದ್ಯಾರ್ಥಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಅಲ್ಲಿಂದ ವಿದ್ಯಾರ್ಥಿಯು ಮತ್ತೊಂದು ರೆಸ್ಟೊರೆಂಟ್‌ನಲ್ಲಿ ಕೆಲಸವನ್ನು ಕಂಡುಕೊಂಡಿದ್ದಾರೆ. ಆದರೆ, ಅಲ್ಲಿ ದಿನಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಲು ಅವಕಾಶವಿಲ್ಲ. ಅದರಿಂದಾಗಿ ತಿಂಗಳ ಗಳಿಕೆಯಲ್ಲಿ ತೀರಾ ವ್ಯತ್ಯಾಸವಾಗಿದ್ದು, ದಿನಸಿಗೂ ಆ ದುಡಿಮೆಯು ಸಾಕಾಗುತ್ತಿಲ್ಲ ಎಂದಿದ್ದಾರೆ.
ಅಟ್ಲಾಂಟಾದಲ್ಲಿರುವ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರ ಬದುಕು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಹಿಂದೆ ಪಾರ್ಟ್‌ಟೈಂ ಕೆಲಸಗಳಿಂದ ತಿಂಗಳಿಗೆ 1,200 ಡಾಲರ್‌ಗಳಷ್ಟು ಗಳಿಸುತ್ತಿದ್ದರು. ಆ ಹಣವು ಸಾಧಾರಣ ಜೀವನವನ್ನು ನಡೆಸುವುದಕ್ಕೆ ಸಾಕಾಗುತ್ತಿತ್ತು. ಆದರೆ, ಈಗ ಕೆಲಸದ ಮಿತಿಯಿಂದಾಗಿ ಅದರ ಕಾಲು ಭಾಗ ಕೂಡ ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ವೆಚ್ಚವನ್ನು ಸರಿದೂಗಿಸುವ ಸಲುವಾಗಿ ಎರಡು ಕೋಣೆಗಳ ಅಪಾರ್ಟ್ಮೆಂಟ್‌ನಲ್ಲಿ ಆರು ಜನರು ವಾಸ ಮಾಡುತ್ತಿದ್ದಾರೆ. ಸದ್ಯಕ್ಕೆ ಖರ್ಚು ಕಡಿಮೆ ಮಾಡಿಕೊಳ್ಳುವುದೊಂದೆ ಅವರಿಗೆ ಕಾಣಿಸುತ್ತಿರುವ ಮಾರ್ಗ. ಇಂಥ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರತಿ ಡಾಲರ್ ಕೂಡ ಮುಖ್ಯ. ಹೊರಗೆ ತಿನ್ನೋದು, ಮನರಂಜನೆ ಮತ್ತು ಪ್ರಯಾಣಕ್ಕಾಗಿ ಖರ್ಚು ಮಾಡುವುದು, ಎಲ್ಲವನ್ನೂ ನಿಲ್ಲಿಸಿ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ.
ಬಹುತೇಕ ವಿದ್ಯಾರ್ಥಿಗಳಿಗೆ ಈಗ ಮುಂದಿನ ದಾರಿಯು ಮಸುಕಾಗಿ ಕಾಣುತ್ತಿದೆ. ಕೋರ್ಸ್ ಮುಗಿಯುತ್ತಿದ್ದಂತೆ ಅಮೆರಿಕದಲ್ಲಿ ಕೆಲಸದ ಅನುಭವ ಪಡೆಯಲು ಒಪಿಟಿ ಪ್ರೋಗ್ರಾಮ್ ಉತ್ತಮ ಮಾರ್ಗ. ಆದರೆ, ಈಗ ಅದರ ಅವಕಾಶಗಳೇ ಕಡಿಮೆಯಾಗುತ್ತಿವೆ. ಯಾವ ಕಂಪನಿಯಲ್ಲಿ ಕೆಲಸಕ್ಕೆ ಸೇರಬೇಕು, ಅದಕ್ಕಾಗಿ ಹೇಗೆಲ್ಲ ಸಿದ್ಧತೆ ನಡೆಬೇಕು, ಹೊಸ ವಿಷಯಗಳನ್ನು ಕಲಿಯುವುದರ ಕಡೆಗೆ ಗಮನ ಕೊಡಬೇಕು, ಒಳ್ಳೆಯ ಸ್ಕೋರ್ ಜೊತೆಗೆ ಕೋರ್ಸ್ ಪೂರೈಸಬೇಕು, ಎಂಬಿತ್ಯಾದಿ ಯೋಚನೆಗಳನ್ನೆಲ್ಲ ವಿದ್ಯಾರ್ಥಿಗಳು ಮರೆಯುವಂತಾಗಿದೆ. ಮುಂದಿನ ತಿಂಗಳ ಖರ್ಚಿಗೆ ಏನು ಮಾಡುವುದು, ಬಾಡಿಗೆ ಪಾವತಿ ಹೇಗೆ, ವೀಸಾ ನಿಯಮಗಳು ಇನ್ನೂ ಕಠಿಣ ಆದರೆ ಏನು ಮಾಡುವುದು, ಇಂಥದ್ದೇ ಯೋಚನೆಯಲ್ಲಿ ಮುಳುಗಿ ಹೋಗುತ್ತಿದ್ದಾರೆ.
ಅಂಥ ಸ್ಥಿತಿಯಲ್ಲಿ ವಿದ್ಯಾರ್ಥಿಯು ಸಾಧಿಸುವುದಾದರೂ ಏನನ್ನು? ಕೋರ್ಸ್ ಮುಗಿಸುವುದಕ್ಕೆ ಮತ್ತು ಅಲ್ಲಿ ನಾಲ್ಕೈದು ವರ್ಷಗಳು ಜೀವನ ಸಾಗಿಸೋಕೆ ಸಾಕಷ್ಟು ಹಣ ಇರಬೇಕು, ಇಲ್ಲವೇ ಸ್ಕಾಲರ್‌ಶಿಪ್ ಸೇರಿದಂತೆ ಇತರೆ ವ್ಯವಸ್ಥೆ ಆಗಿದ್ದರೆ ಮಾತ್ರ ಅಮೆರಿಕಕ್ಕೆ ಹೋಗುವುದು ಉತ್ತಮ. ಈಗಂತೂ ಎಲ್ಲವೂ ಸರಿಯಿದ್ದರೂ ನಿಯಮಗಳಲ್ಲಿ ಆಗುತ್ತಿರುವ ಬದಲಾವಣೆಗಳು ವಿದ್ಯಾರ್ಥಿಗಳ ಗಮನವನ್ನು ಚಿಂತಿಗೆ ಹಚ್ಚುತ್ತಿದೆ. ಅದರ ಜೊತೆಗೆ ಆರ್ಥಿಕ ಹೊರೆಯೂ ಎದುರಾದರೆ, ಬದುಕು ಬಿಕ್ಕಟ್ಟಿನ ಸಂತೆಯಾಗಿಬಿಡುತ್ತದೆ. ಸರಿಯಾಗಿ ಕೋರ್ಸ್ ಮುಗಿಸಿದರೇನೆ ಮುಂದೆ ಒಳ್ಳೆಯ ಕೆಲಸ ಹುಡುಕಿಕೊಳ್ಳೋದಕ್ಕೂ ಅನುಕೂಲ. ಅಮೆರಿಕದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಈ ಎಲ್ಲ ವಿಚಾರಗಳ ಬಗ್ಗೆಯೂ ಸರಿಯಾಗಿ ಯೋಚಿಸುವುದು, ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ.
