ಪ್ರೇಮಿಗಳಿಗೆ ಗ್ರಾಮಸ್ಥರ ಶಾಕ್; ಓಡಿಹೋಗಿ ಮದುವೆಯಾದರೆ ಹಾಲು, ಕೆಲಸ ಎಲ್ಲವೂ ಬಂದ್!

ರತ್ಲಂ: ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಹಳ್ಳಿಯೊಂದರ ನಿವಾಸಿಗಳು ಮದುವೆಯಾಗಲು ಓಡಿಹೋಗುವ ಜೋಡಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಆದೇಶ ಹೊರಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ

ಜನವರಿ 23 ರಂದು ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಪಂಚೇವಾದಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಕಳೆದ ಆರು ತಿಂಗಳಲ್ಲಿ ಗ್ರಾಮದ ಎಂಟು ಜೋಡಿಗಳು ಓಡಿಹೋಗಿ ಮದುವೆಯಾದ ನಂತರ ಸಾಮಾಜಿಕ ಬಹಿಷ್ಕಾರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಿವಾಸಿಗಳು ಹೇಳಿಕೊಂಡಿದ್ದಾರೆ.

ಪ್ರೀತಿಗಾಗಿ ಓಡಿಹೋಗಿ ಮದುವೆಯಾಗುವ ಯುವಕರು ಮತ್ತು ಮಹಿಳೆಯರು ಹಾಗೂ ಅವರ ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುವುದು ಮತ್ತು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ ಎಂದು ವ್ಯಕ್ತಿಯೊಬ್ಬ ಘೋಷಿಸಿದ್ದಾರೆ. ಅಂತಹ ವ್ಯಕ್ತಿಗಳಿಗೆ ಸಹಾಯ ಮಾಡುವವರು ಸಹ ಅದೇ ಕ್ರಮವನ್ನು ಎದುರಿಸಬೇಕಾಗುತ್ತದೆ. ಬಹಿಷ್ಕಾರದ ಇತರ ಕ್ರಮಗಳಲ್ಲಿ, ಅಂತಹ ದಂಪತಿಗಳಿಗೆ ಉದ್ಯೋಗ ನಿರಾಕರಿಸುವುದು ಮತ್ತು ಹಾಲಿನಂತಹ ದೈನಂದಿನ ಅಗತ್ಯಗಳನ್ನು ನಿರಾಕರಿಸುವುದು ಸೇರಿದೆ ಎಂದು ಅವರು ಹೇಳಿದ್ದಾರೆ.
ಸೋಮವಾರ ಕಲೆಕ್ಟರ್ ಮಿಶಾ ಸಿಂಗ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಪ್ರೇಮ ವಿವಾಹಗಳ ವಿರುದ್ಧದ ನಿರ್ಧಾರವನ್ನು ಗ್ರಾಮ ಸಭೆ ತೆಗೆದುಕೊಂಡಿಲ್ಲ, ಬದಲಾಗಿ ಗ್ರಾಮಸ್ಥರೇ ತೆಗೆದುಕೊಂಡಿದ್ದಾರೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ವಿವೇಕ್ ಕುಮಾರ್ ಲಾಲ್ ಅವರು, ಬಹಿಷ್ಕಾರ ಘೋಷಣೆ ಮಾಡಿದವರನ್ನು ಬಂಧಿಸಲಾಗುವುದು. ವಿವರವಾದ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.