ಬಿಗ್ ಬಾಸ್ ಪ್ರಿಯರಿಗೆ ಶಾಕ್: ರಿಯಾಲಿಟಿ ಶೋ ವಿರುದ್ಧ ಬಂತು ಬರೋಬ್ಬರಿ ₹2 ಕೋಟಿ ರೂಪಾಯಿ ಕೇಸ್!

‘ಬಿಗ್ ಬಾಸ್’ (Bigg Boss) ದೇಶದ ಅತ್ಯಂತ ಮನರಂಜನಾತ್ಮಕ ಹಾಗೂ ಅಷ್ಟೇ ವಿವಾದಿತ ಶೋಗಳಲ್ಲಿ ಒಂದು. ಈ ಶೋಗೆ ಕಾನೂನಿನ ಸಮಸ್ಯೆಗಳು, ಪೊಲೀಸ್ ಕೇಸ್ಗಳು ಹೊಸದೇನು ಅಲ್ಲ. ಪ್ರತಿ ವರ್ಷವೂ ಈ ರೀತಿಯ ಕೆಲವು ಸಮಸ್ಯೆಗಳು ಇದ್ದೇ ಇರುತ್ತವೆ. ಈ ವರ್ಷವೂ ಅದು ಮುಂದುವರಿದಿದೆ. ‘ಹಿಂದಿ ಬಿಗ್ ಬಾಸ್’ 19ನೇ ಸೀಸನ್ಗೆ ಸಂಕಷ್ಟ ಎದುರಾಗಿದೆ. ಮ್ಯೂಸಿಕ್ ಸಂಸ್ಥೆಯೊಂದು ಈ ಶೋನ ವಿರುದ್ಧ 2 ಕೋಟಿ ರೂಪಾಯಿ ಕೇಸ್ ಹಾಕಿದೆ ಎಂದು ವರದಿ ಆಗಿದೆ.

ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ ಬಿಗ್ ಬಾಸ್ ಮೇಕರ್ಗಳಾದ ಎಂಡಮೋಲ್ ಶೈನ್ ಇಂಡಿಯಾ ಹಾಗೂ ಬನಿಜಾಯ್ ವಿರುದ್ಧ ನೋಟಿಸ್ ಜಾರಿ ಮಾಡಿದೆ. ‘ಅಗ್ನೀಪತ್’ ಸಿನಿಮಾದ ‘ಚಿಕಣಿ ಚಮೇಲಿ’ ಹಾಗೂ ‘ಗೋರಿ ತೇರಿ ಪ್ಯಾರ್ ಮೇ’ ಸಿನಿಮಾದ ‘ಧಾತ್ ತೇರಿ ಕಿ ಮೇ’ ಹಾಡನ್ನು 11ನೇ ಎಪಿಸೋಡ್ನಲ್ಲಿ ಬಳಸಿದ ಆರೋಪ ಇದೆ. ಯಾವುದೇ ಒಪ್ಪಿಗೆ ಇಲ್ಲದೆ ಈ ಹಾಡು ಬಳಕೆ ಆಗಿದೆ ಎಂದು ವರದಿ ಆಗಿದೆ.
ಸೋನಿ ಮ್ಯೂಸಿಕ್ ಇಂಡಿಯಾ ಈ ಹಾಡುಗಳ ಹಕ್ಕನ್ನು ಹೊಂದಿವೆ. ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ ಈ ಹಕ್ಕುಗಳ ನಿರ್ವಹಣೆ ಮಾಡುತ್ತದೆ. ಸಂಸ್ಥೆಯ ಅನುಮತಿಯಿಲ್ಲದೆ ಹಾಡುಗಳನ್ನು ಬಳಸುವುದು ಉದ್ದೇಶಪೂರ್ವಕ ನಿಯಮ ಉಲ್ಲಂಘನೆಯಾಗಿದೆ. ಆರ್ಥಿಕ ಹಾನಿ ಮತ್ತು ಪರವಾನಗಿ ಶುಲ್ಕವನ್ನು ನೀಡಬೇಕು ಎಂದು ಹೇಳಿದೆ. ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ರಾಜಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕೆಲವು ವರದಿಗಳ ಪ್ರಕಾರ ಇದಕ್ಕೂ ಎಂಡಮೋಲ್ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ. ಯಾವ ಹಾಡುಗಳನ್ನು ಪ್ಲೇ ಮಾಡಬೇಕು ಎಂಬುದನ್ನು ಜಿಯೋ ಹಾಟ್ಸ್ಟಾರ್ನ ಪ್ರೋಮೋ ಟೀಮ್ನವರು ನಿರ್ಧರಿಸುತ್ತಾರೆ ಎನ್ನಲಾಗಿದೆ. ಹೀಗಾಗಿ, ಈ ನೋಟಿಸ್ಗೆ ಜಿಯೋ ಹಾಟ್ಸ್ಟಾರ್ ಉತ್ತರಿಸುತ್ತದೆಯೇ ಎಂಬ ಪ್ರಶ್ನೆಯೂ ಮೂಡಿದೆ.
ಸದ್ಯ ಕನ್ನಡದ ಬಿಗ್ ಬಾಸ್ ಆರಂಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಶೋ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿ ಯಾವ ರೀತಿಯ ಸ್ಪರ್ಧಿಗಳು ಬರುತ್ತಾರೆ ಎಂಬ ಕುತೂಹಲ ಮೂಡಿದೆ. ಕಳೆದ ಬಾರಿ ಶೋ ವಿವಾದಗಳಿಂದಲೇ ತುಂಬಿ ಹೋಗಿತ್ತು. ಈ ಬಾರಿ ಆ ರೀತಿ ಆಗದಿರಲಿ ಎಂಬುದು ಎಲ್ಲರ ಆಶಯ.
