ಶಿರಸಿ ನಗರಸಭೆ ಬಿಜೆಪಿ ಸದಸ್ಯ ಲಂಚ ಸ್ವೀಕಾರ ಆರೋಪದ ಮೇಲೆ ಬಂಧನ: ಪೈಪ್ ಕಳ್ಳತನ ಪ್ರಕರಣದಲ್ಲೂ ಆರೋಪಿ!

ಕಾರವಾರ: ಶಿರಸಿ ನಗರಸಭೆಯ (Sirsi City Municipal Council) ಪೈಪ್ ಕದ್ದ ಆರೋಪ ಹೊತ್ತಿರುವ ಹಾಲಿ ಬಿಜೆಪಿ ಸದಸ್ಯನನ್ನು ಲೋಕಾಯುಕ್ತ (Lokayukta) ಪೊಲೀಸರು ಲಂಚ ಸ್ವೀಕಾರ ಆರೋಪದ ಮೇಲೆ ಬಂಧಿಸಿದ್ದಾರೆ. ಲೀಸ್‌ಗೆ ಪಡೆದ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಶಿರಸಿ ನಗರಸಭೆ ಬಿಜೆಪಿ ಸದಸ್ಯ ಗಣಪತಿ ನಾಯ್ಕ ಹಾಗೂ ನಗರಸಭೆ ಅಧಿಕಾರಿ ಆರ್.ಎಂ.ವರ್ಣೇಕರ್, ರಮೇಶ ಹೆಗಡೆ ಎಂಬುವರಿಂದ ಶಿರಸಿ ನಗರದ ರಿಲಾಯನ್ಸ್ ಕಚೇರಿ ಮುಂದೆ ಕಾರಿನಲ್ಲಿ 3 ಲಕ್ಷ ರೂ.

ಲಂಚ ಸ್ವೀಕರಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಗಣಪತಿ ನಾಯ್ಕ ಮತ್ತು ಆರ್.ಎಂ.ವರ್ಣೇಕರ್ ಇಬ್ಬರನ್ನೂ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ಗಣಪತಿ ನಾಯ್ಕ ನಗರಸಭೆ ಪೈಪ್ ಕಳ್ಳತನ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.
ಏನಿದು ಪೈಪ್ ಲೈನ್ ಕಳ್ಳತನ
ಶಿರಸಿ ನಗರಕ್ಕೆ ಕುಡಿಯುವ ನೀರು ಪೂರೈಸಲು 60 ವರ್ಷಗಳ ಹಿಂದೆ ಕೆಂಗ್ರೆ ಹೊಳೆಯಿಂದ ಶಿರಸಿ ನಗರಕ್ಕೆ, ಸುಮಾರು 8 ಕಿ.ಮೀ ಉದ್ದದ ಕಾಸ್ಟ್ ಐರನ್ (ಗಟ್ಟಿ ಕಬ್ಬಿಣ) ಪೈಪ್ ಲೈನ್ ಮಾಡಲಾಗಿತ್ತು. ಪೈಪ್ ಲೈನ್ ಬಹಳ ಹಳೆಯದಾಗಿದ್ದರಿಂದ ಕೆಲ ವರ್ಷಗಳಿಂದ, ಪೈಪ್ಗಳಲ್ಲಿ ಲಿಕೇಜ್ ಜಾಸ್ತಿ ಆಗಿ ನೀರು ಪೋಲಾಗುವುದು ಹಾಗೂ ನೀರು ಪೂರೈಕೆಯಲ್ಲೂ ವ್ಯತ್ಯಯ ಆಗುತಿತ್ತು.
ಹೀಗಾಗಿ, ಎರಡು ವರ್ಷಗಳ ಹಿಂದೆ ಅಂದರೆ 2023 ರಲ್ಲಿ ಕೆಂಗ್ರೆ ಹೊಳೆಯಿಂದಲೇ ಹೊಸ ಪೈಪ್ ಲೈನ್ ಮಾಡಲಾಗಿತ್ತು. ಹಳೆಯ ಪೈಪ್ಗಳು ಉಪಯೋಗವಾಗದೆ ಹಾಗೇ ಇದ್ದವು. ಕೆಲ ತಿಂಗಳ ಹಿಂದೆ ನಗರದ ಕೆಲವಡೆ ಅಭಿವೃದ್ಧಿ ಕಾಮಗಾರಿ ಸಂಬಂಧ ನೆಲದಲ್ಲಿ ಹೂತಿದ್ದ ಪೈಪ್ಗಳನ್ನು ತೆಗೆಯಬೇಕಾದಾಗ, ನಗರಸಭೆಯವರು ಶಿವಮೊಗ್ಗ ಮೂಲದ ಝಕ್ರಿಯಾ ಎಂಬ ಗುತ್ತಿಗೆದಾರನಿಗೆ, ಪೈಪ್ ತೆಗೆದು ಮಾರಾಟ ಮಾಡಲು ಗುತ್ತಿಗೆ ನೀಡಿದ್ದರು.
ಈ ಸಂದರ್ಭದಲ್ಲಿ ಝಕ್ರಿಯಾ ಸುಮಾರು 6 ಲಕ್ಷ ರೂಪಾಯಿ ನಗರಸಭೆಗೆ ಕೊಟ್ಟು ಪೈಪ್ಗಳನ್ನು ನೆಲದಿಂದ ತೆಗೆದು, ಮಾರಾಟ ಮಾಡಿದ್ದನು. ಬಳಿಕ ನಗರಸಭೆಯಿಂದ ಯಾವುದೇ ಪರವಾನಗಿ ಹಾಗೂ ಗುತ್ತಿಗೆ ಪಡೆಯದೆ, ಶಿರಸಿ ನಗರದ ಹೊರವಲಯದಲ್ಲಿರುವ 900 ಮೀಟರ್ ಉದ್ದದ ಸುಮಾರು 116ಕ್ಕೂ ಹೆಚ್ಚು ಪೈಪ್ಗಳನ್ನೂ ಕೂಡ ಅಕ್ರಮವಾಗಿ ಮಾರಾಟ ಮಾಡಿದ್ದನು ಎಂದು ದೂರು ದಾಖಲಾಗಿತ್ತು.
ಲಕ್ಷಾಂತರ ಮೌಲ್ಯದ ಐರನ್ ಪೈಪ್ಗಳನ್ನು ಹಾಡಹಗಲೇ ಕಳ್ಳತನ ಮಾಡಿಕೊಂಡು ಹೋಗಿರುವ ಪ್ರಕರಣದ ತನಿಖೆಯನ್ನು ಗ್ರಾಮೀಣ ಠಾಣೆ ಪೊಲೀಸರು ನಡೆಸಿದರು. ಆಗ, ಈ ಕಳ್ಳತನ ಪ್ರಕರಣದಲ್ಲಿ ಶಿರಸಿ ನಗರಸಭೆಯ ಹಾಲಿ ಬಿಜೆಪಿ ಸದಸ್ಯ ಗಣಪತಿ ನಾಯ್ಕ ಕೂಡ ಭಾಗಿಯಾಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಈ ಪ್ರಕರಣದಲ್ಲಿ ಒಟ್ಟು 7 ಜನ ಆರೋಪಿಗಳು ಭಾಗಿಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ.
