ವಿವಾದಕ್ಕೆ ಸಿಲುಕಿದ ಶಿಲ್ಪಾ ಶೆಟ್ಟಿ: ಪೊಲೀಸರ ನೋಟಿಸ್; ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದೇಕೆ?

ಉದ್ಯಮಿ ರಾಜ್ ಕುಂದ್ರಾ (Raj Kundra) ಒಂದರ ಹಿಂದೊಂದರಂತೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ. ಬೆಟ್ಟಿಂಗ್ ಪ್ರಕರಣ, ಅದಾದ ಬಳಿಕ ವಂಚನೆ ಪ್ರಕರಣ, ಅದರ ಬಳಿಕ ನೀಲಿ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಈಗ 60 ಕೋಟಿ ರೂಪಾಯಿ ವಂಚನೆ ಪ್ರಕರಣ ರಾಜ್ ಕುಂದ್ರಾ ಮೇಲಿದೆ. ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಹೆಸರೂ ಸಹ ಕೇಳಿ ಬಂದಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ನ ಆರ್ಥಿಕ ವಿಭಾಗದ ಪೊಲೀಸರು ಶಿಲ್ಪಾ ಶೆಟ್ಟಿಗೆ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ರಾಜ್ ಕುಂದ್ರಾ ಆರೋಪಿಯಾಗಿರುವ 60 ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆ ಹಣದಲ್ಲಿ 15 ಕೋಟಿ ಹಣವನ್ನು ರಾಜ್ ಕುಂದ್ರಾ, ನಟಿ ಶಿಲ್ಪಾ ಶೆಟ್ಟಿಯ ಮಾಲೀಕತ್ವದ ಕಂಪೆನಿಗೆ ವರ್ಗಾವಣೆ ಮಾಡಿರುವುದು ಪತ್ತೆ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಆ ಹಣವನ್ನು ಕಂಪೆನಿಯ ಬೇರೆ ಬೇರೆ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ. ಇದೀಗ ಪೊಲೀಸರು ಶಿಲ್ಪಾ ಶೆಟ್ಟಿಗೆ ನೊಟೀಸ್ ನೀಡಿದ್ದು, ಅವರ ಕಂಪೆನಿಯ ಖರ್ಚು ವೆಚ್ಚ, ಜಾಹೀರಾತು ಖರ್ಚು ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಮಾಡಿ ಉತ್ತರಗಳನ್ನು ಪಡೆದುಕೊಳ್ಳಲಿದ್ದಾರೆ.
60 ಕೋಟಿ ವಂಚನೆ ಪ್ರಕರಣದ ತನಿಖೆ ಕಳೆದ ಕೆಲ ವಾರಗಳಿಂದಲೂ ನಡೆಯುತ್ತಿದ್ದು, ರಾಜ್ ಕುಂದ್ರಾ ಅವರನ್ನು ಈಗಾಗಲೇ ಒಮ್ಮೆ ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ರಾಜ್ ಕುಂದ್ರಾ ನಟಿಯರಾದ ನೇಹಾ ದೂಪಿಯಾ, ಬಿಪಾಷಾ ಬಸು ಹೆಸರನ್ನು ಹೇಳಿದ್ದಾರೆ. ಅವರಿಗೂ ಸಹ ರಾಜ್ ಕುಂದ್ರಾ ಖಾತೆಯಿಂದ ಹಣ ಹೋಗಿದೆ ಎನ್ನಲಾಗಿದೆ.
ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿಗೆ ಪೊಲೀಸರ ನೊಟೀಸ್ಗಳ ಹೊಸ ವಿಷಯವಲ್ಲ. ರಾಜಸ್ಥಾನ ರಾಯಲ್ಸ್ನ ಸಹ ಮಾಲೀಕತ್ವ ಹೊಂದಿದಾಗಿನಿಂದಲೂ ಈ ದಂಪತಿ ಬ್ಯುಸಿನೆಸ್ ಕಾರಣಕ್ಕೆ ವಿವಾದಗಳಲ್ಲಿ ತೊಡಗಿಕೊಳ್ಳುತ್ತಲೇ ಇದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಇದ್ದಾಗ ಬೆಟ್ಟಿಂಗ್ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರು ಕೇಳಿ ಬಂತು. ಅದಾದ ಬಳಿಕ ಚಿನ್ನದ ಮಳಿಗೆ ಹೆಸರಲ್ಲಿ ವಂಚನೆ ಪ್ರಕರಣ, ಸಾಲ ಪಡೆದು ವಂಚನೆ ಪ್ರಕರಣ ಅದಾದ ಬಳಿಕ ರಾಜ್ ಕುಂದ್ರಾ, ನೀಲಿ ಚಿತ್ರಗಳನ್ನು ನಿರ್ಮಿಸಿದ ಪ್ರಕರಣದಲ್ಲಿ ಜೈಲು ಸಹ ಸೇರಿದರು. ಈಗ ಎಲ್ಲವೂ ಸರಿ ಹೋಯ್ತು ಎಂದುಕೊಳ್ಳುತ್ತಿರುವಾಗ 60 ಕೋಟಿ ರೂಪಾಯಿ ವಂಚನೆ ಪ್ರಕರಣ ಈ ದಂಪತಿಯ ಬೆನ್ನೇರಿದೆ.
