Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿಗ್ಗಾಂವಿ: ನಕಲಿ ಮರಣ ಪ್ರಮಾಣಪತ್ರ ಸೃಷ್ಟಿಸಿ ಆಸ್ತಿ ಕಬಳಿಕೆ ಯತ್ನ, ಪುರಸಭೆ ಅಧಿಕಾರಿಗೂ ನೋಟಿಸ್

Spread the love

ಶಿಗ್ಗಾಂವಿ (): ಜೀವಂತ ಇರುವಾಗಲೇ ಸುಳ್ಳು ಅರ್ಜಿ ನೀಡಿ ತಾಯಿಯ ಮರಣ ಪ್ರಮಾಣಪತ್ರ ಪಡೆದು ವ್ಯಕ್ತಿಯೊಬ್ಬ ಆಸ್ತಿ ಕಬಳಿಸಲು ಪ್ರಯತ್ನಿಸಿ ಪೊಲೀಸರ ಅತಿಥಿಯಾದ ಘಟನೆ ಪಟ್ಟಣದ ಖಾಜೇಖಾನ್ ಗಲ್ಲಿಯಲ್ಲಿ ನಡೆದಿದೆ. ಮರಣ ಪ್ರಮಾಣಪತ್ರ ನೀಡಿದ ಪುರಸಭೆಯ ಅಧಿಕಾರಿಗೂ ನೋಟಿಸ್ ನೀಡಲಾಗಿದೆ. ಪಟ್ಟಣದ ಖಾಜೇಖಾನ್ ಗಲ್ಲಿಯ ಹೂರಾಂಬಿ ಜಂಗ್ಲಿಸಾಬ್ ಮುಲ್ಕಿ (60) ಎಂಬುವರೇ ದೂರು ದಾಖಲಿಸಿದ್ದು, ಹುಬ್ಬಳ್ಳಿಯಲ್ಲಿ ವಾಸವಿರುವ ಅವರ ಏಕೈಕ ಪುತ್ರ ಶೌಕತ್ ಅಲಿ ಮುಲ್ಕಿ (39) ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ಹಿನ್ನೆಲೆ: ದೂರುದಾರರ ಪತಿ 2001ರಲ್ಲೇ ತೀರಿಕೊಂಡಿದ್ದು, ಪುತ್ರ ಶೌಕತ್ ಅಲಿ ಸುಮಾರು 10 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಬೇರೆ ಮನೆ ಮಾಡಿಕೊಂಡು ಪತ್ನಿಯೊಂದಿಗೆ ವಾಸವಾಗಿದ್ದಾನೆ. ಹೂರಾಂಬಿ ಶಿಗ್ಗಾಂವಿಯಲ್ಲಿ ಒಂಟಿಯಾಗಿ ವಾಸವಿದ್ದಾರೆ. 2 ಎಕರೆ ಜಮೀನು ಹೂರಾಂಬಿ ಹಾಗೂ ಪುತ್ರನ ಜಂಟಿ ಖಾತೆಯ ಹೆಸರಿನಲ್ಲಿದೆ. ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಮಗ, ಆರೋಪಿ ಶೌಕತ್ ಪುರಸಭೆಯಲ್ಲಿ 2025ರ ಮೇ 6ರಂದು ಶಿಗ್ಗಾಂವಿ ಪಟ್ಟಣದ ಖಾಜೆಖಾನ್ ಗಲ್ಲಿಯಲ್ಲಿ ತಾಯಿ ಮರಣ ಹೊಂದಿದ್ದಾಳೆ ಎಂದು ಮರಣ ಪ್ರಮಾಣಪತ್ರವನ್ನು ಪಡೆದಿದ್ದಾನೆ. ಈ ವಿಷಯ ಆತನ ತಾಯಿಗೆ ಗೊತ್ತಾಗಿದ್ದು, ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಾನೂನು ಕ್ರಮ: ಜನನ, ಮರಣ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿ ನೀಡಬೇಕು. ಪಟ್ಟಣದ ಖಾಜೇಖಾನ್ ಗಲ್ಲಿಯ ನಿವಾಸಿ ಹೂರಾಂಬಿ ಅವರ ಮರಣ ಪ್ರಮಾಣಪತ್ರ ನೀಡಿರುವ ಅಧಿಕಾರಿಗೆ ನೋಟಿಸ್ ನೀಡಲಾಗಿದ್ದು, ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ತಿಳಿಸಿದರು

ಕರ್ತವ್ಯ ಲೋಪ: ಶಿಗ್ಗಾಂವಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪದಿಂದ ಈ ಘಟನೆ ನಡೆದಿದೆ. ಹೂರಾಂಬಿ ಜಂಗ್ಲಿಸಾಬ್ ಮುಲ್ಕಿ ಅವರು ನನ್ನ ವಾರ್ಡ್ ನಿವಾಸಿಯಾಗಿದ್ದು, ವಾರ್ಡ್ ಜನಪ್ರತಿನಿಧಿಯಾಗಿರುವ ನನ್ನ ಗಮನಕ್ಕೂ ತಾರದೆ ಅವರು ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪುರಸಭೆ ಸದಸ್ಯ ದಯಾನಂದ ಅಕ್ಕಿ ತಿಳಿಸಿದರು.

ದುರುದ್ದೇಶ: ನಾನು ಜೀವಂತ ಇರುವಾಗಲೇ ನನ್ನ ಮಗ ಶೌಕತ್ ಅಲಿ ನಮ್ಮಿಬ್ಬರ ಜಂಟಿ ಹೆಸರಿನಲ್ಲಿರುವ ಆಸ್ತಿಯನ್ನು ಮೋಸದಿಂದ ಕಬಳಿಸುವ ದುರುದ್ದೇಶದಿಂದ ಪುರಸಭೆಗೆ ಸುಳ್ಳು ಅರ್ಜಿ ಕೊಟ್ಟು ಮರಣ ಪ್ರಮಾಣಪತ್ರ ಸೃಷ್ಟಿಸಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಿಗ್ಗಾಂವಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ದೂರು ದಾಖಲಿಸಿರುವ ವೃದ್ಧೆ ಹೂರಾಂಬಿ ತಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *