ಶೇರಿಂಗ್ ಇಸ್ ಕೇರಿಂಗ್: ಒಂದೇ ತಟ್ಟೆಯಲ್ಲಿ ಪುಂಗನೂರು ಕರುವಿನೊಂದಿಗೆ ಊಟ ಮಾಡಿದ ಮಾಲೀಕ; ನಿಸ್ವಾರ್ಥ ಪ್ರೀತಿಯ ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಈ ಪ್ರಾಣಿಗಳ ಸ್ವಾರ್ಥವಿಲ್ಲದ ಪರಿಶುದ್ಧ ಪ್ರೀತಿಯನ್ನು ಕಂಡಾಗ ಖುಷಿಯಾಗುತ್ತದೆ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಪುಂಗನೂರು ಕರುವಿನ ಜತೆಗೆ ಮಾಲೀಕನು ಆಹಾರವನ್ನು ಹಂಚಿಕೊಳ್ಳುವ ದೃಶ್ಯವಿದಾಗಿದೆ. ಈ ಶುದ್ಧ ಪ್ರೀತಿಯನ್ನು ಸಾರುವ ಈ ವಿಡಿಯೋವು ನೆಟ್ಟಿಗರ ಹೃದಯ ಗೆದ್ದಿದೆ.
ಮನುಷ್ಯರ ನಡುವೆ ಜಾತಿ, ವರ್ಣಗಳ ಭೇದಗಳಿರುವಂತೆ ಮೂಕ ಪ್ರಾಣಿಗಳಲ್ಲಿ ಇದ್ಯಾವುದೇ ಬೇಧ-ಬಾವಗಳಿಲ್ಲ. ಅಷ್ಟೇ ಅಲ್ಲದೆ ಈ ಪ್ರಾಣಿಗಳಿಗೆ (animals) ಇರುವಷ್ಟು ಕರುಣೆ, ದಯೆ, ಮಾನವೀಯ ಮೌಲ್ಯ ಮನುಷ್ಯರಲ್ಲಿಲ್ಲ. ನೀವೇನಾದ್ರು ಈ ಪ್ರಾಣಿಗಳಿಗೆ ಶುದ್ಧ ಪ್ರೀತಿಯನ್ನು ನೀಡಿದ್ರೆ ಅದೇ ಪ್ರೀತಿಯನ್ನು ಅವು ನೀಡುತ್ತವೆ. ಹೀಗಾಗಿ ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ, ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಒಂದೇ ತಟ್ಟೆಯಲ್ಲಿ ಮಾಲೀಕನು ಪುಂಗನೂರು ಕರುವಿನ (Punganur calf) ಜತೆಗೆ ಊಟ ಮಾಡಿದ್ದು ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

ಶುದ್ಧ ಮನಸ್ಸಿನ ಪರಿಶುದ್ಧ ಪ್ರೀತಿ ಹೇಗಿದೆ ನೋಡಿ
ಸನಾತನ ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಾಲೀಕನು ಕರುವಿನೊಂದಿಗೆ ಊಟ ಮಾಡುತ್ತಿರುವ ದೃಶ್ಯ ಇದಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಪುಂಗನೂರು ಹಸು, ಗೋಮಾತೆಯ ಜೊತೆ ಆಹಾರವನ್ನು ಹಂಚಿಕೊಳ್ಳುವುದು ನೀವು ಹಿಂದೂಗಳಲ್ಲಿ ಮಾತ್ರ ನೋಡಬಹುದು ಎಂದು ಬರೆದುಕೊಳ್ಳಲಾಗಿದೆ.ಈ ವಿಡಿಯೋದಲ್ಲಿ ಮಾಲೀಕ ಹಾಗೂ ಪುಂಗನೂರು ಕರು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದು, ಸ್ವಾರ್ಥವಿರದ ನಿಸ್ವಾರ್ಥ ಪ್ರೀತಿಯನ್ನು ಈ ದೃಶ್ಯದಲ್ಲಿ ನೀವು ನೋಡಬಹುದು.
ಅಕ್ಟೋಬರ್ 7 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ದೃಶ್ಯ ನೋಡಲು ಸೊಗಸಾಗಿದೆ, ಶುದ್ಧಯ ಪ್ರೀತಿ ಹೀಗೆಯೇ ಇರುತ್ತದೆ ಎಂದಿದ್ದಾರೆ. ಇನ್ನೊಬ್ಬರು ಜೈ ಗೋಮಾತಾ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರ ಪ್ರಾಣಿಗಳಿಗೆ ಶುದ್ಧ ಪ್ರೀತಿ ನೀಡಿದರೆ ಅದು ಅಷ್ಟೇ ಪರಿಶುದ್ಧ ಪ್ರೀತಿಯನ್ನು ನಿಮಗೆ ನೀಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.