ಲೈಂಗಿಕ ಕಿರುಕುಳದ ಆರೋಪ: ಹಿರಿಯ ಸಹೋದ್ಯೋಗಿಗೆ ಪದೋನ್ನತಿ ನೀಡಿದ್ದಕ್ಕೆ ಸಿವಿಲ್ ನ್ಯಾಯಾಧೀಶೆಯಿಂದ ರಾಜೀನಾಮೆ!

ಭೋಪಾಲ್: ಕಿರುಕುಳ ನೀಡುತ್ತಿದ್ದ ಮತ್ತು ದುರ್ನಡತೆಯ ಹಿರಿಯ ಸಹೋದ್ಯೋಗಿಯೊಬ್ಬರನ್ನು ಮಧ್ಯಪ್ರದೇಶ ಹೈಕೋರ್ಟ್ ಗೆ ನೇಮಕ ಮಾಡಲಾಗಿದೆ ಎಂದು ಆಪಾದಿಸಿ ಸಿವಿಲ್ ನ್ಯಾಯಾಧೀಶೆಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

“ನ್ಯಾಯಾಂಗ ಸೇವೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ; ನಾನು ಸಂಸ್ಥೆಯನ್ನು ಅನುತ್ತೀರ್ಣಗೊಳಿಸಿಲ್ಲ; ಆದರೆ ಸಂಸ್ಥೆ ನನ್ನನ್ನು ಅನುತ್ತೀರ್ಣಗೊಳಿಸಿದೆ” ಎಂದು ಶಾಧೋಲ್ ಕಿರಿಯ ಡಿವಿಷನ್ ಸಿವಿಲ್ ನ್ಯಾಯಾಧೀಶೆ ಅದಿತಿ ಕುಮಾರ್ ಶರ್ಮಾ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಜುಲೈ 28ರಂದು ನೀಡಿರುವ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ
ಅನಧಿಕೃತ ಅಧಿಕಾರ ಚಲಾಯಿಸುತ್ತಿದ್ದ ಹಿರಿಯ ನ್ಯಾಯಾಧೀಶರ ವಿರುದ್ಧ ನಾನು ಧ್ವನಿ ಎತ್ತುವ ಧೈರ್ಯ ತೋರಿದ್ದೆ” ಎಂದು ಹೇಳಿರುವ ಅವರು, ಹಲವು ವರ್ಷಗಳ ಕಾಲ ನಿರಂತರ ಕಿರುಕುಳ ಎದುರಿಸುತ್ತಾ ಬಂದಿದ್ದೇನೆ. ಆದರೆ ಇಷ್ಟು ವರ್ಷವೂ ಕಾನೂನುಬದ್ಧ ಮಾರ್ಗವನ್ನೇ ಅನುಸರಿಸುತ್ತಾ ಬಂದಿದ್ದೆ ಎಂದು ಹೇಳಿಕೊಂಡಿದ್ದಾರೆ. “ನನಗೆ ನ್ಯಾಯ ಒದಗಿಸದಿದ್ದರೂ, ವಿಚಾರಣೆಯನ್ನಾದರೂ ಮಂಜೂರು ಮಾಡುವ ನಿರೀಕ್ಷೆ ಇದೆ” ಎಂದು ಹೇಳಿದ್ದಾರೆ.
“ನನ್ನ ನೋವಿಗೆ ಕಾರಣರಾದವರನ್ನು ಪ್ರಶ್ನಿಸುವ ಬದಲು ಅವರಿಗೆ ಬಹುಮಾನ ನೀಡಿ, ಶಿಫಾರಸ್ಸು ಮಾಡಿ ಪದೋನ್ನತಿ ನೀಡಲಾಗಿದೆ. ಸಮನ್ಸ್ ಬದಲು ಪೀಠವನ್ನು ನೀಡಲಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.
ದಾಖಲೆ ಸಹಿತ ನ್ಯಾಯಾಧೀಶರ ವಿರುದ್ಧ ದೂರು ನೀಡಿದ್ದರೂ, ವಿಚರಣೆ ನಡೆಸಿಲ್ಲ; ನೋಟಿಸ್ ನೀಡಿಲ್ಲ ಮಾತ್ರವಲ್ಲದೇ ವಿವರಣೆಯನ್ನೂ ಕೇಳಿಲ್ಲ. “ವಿಚಾರಣೆ ಇಲ್ಲ; ನೋಟಿಸ್ ಇಲ್ಲ. ಬಾಧ್ಯಸ್ಥರನ್ನಾಗಿ ಮಾಡಿಲ್ಲ. ಇದನ್ನು ನ್ಯಾಯ ಎಂದು ಹೇಳುವುದಿಲ್ಲ. ಇದೊಂದು ವಿಕಟ ಪ್ರಹಸನ” ಎಂದಿದ್ದಾರೆ.
