ಲೈಂಗಿಕ ಹಗರಣದ ಕಳಂಕ: ಪ್ರಿನ್ಸ್ ಆಂಡ್ರ್ಯೂ ರಾಜಮನೆತನದ ವಸತಿ ‘ವಿಂಡ್ಸರ್ ಲಾಡ್ಜ್’ನಿಂದ ನಿರ್ಗಮಿಸಲು ಕಿಂಗ್ ಚಾರ್ಲ್ಸ್ ಆದೇಶ

ಬ್ರಿಟನ್ ರಾಜಮನೆತನದಲ್ಲಿ ಮತ್ತೊಮ್ಮೆ ದೊಡ್ಡ ಸಂಚಲನ ಉಂಟಾಗಿದೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಸಂಬಂಧದ ಆರೋಪದಿಂದ ವರ್ಷಗಳಿಂದ ವಿವಾದಕ್ಕೊಳಗಾಗಿದ್ದ ಪ್ರಿನ್ಸ್ ಆಂಡ್ರ್ಯೂ ವಿರುದ್ಧ ಕೊನೆಗೂ ರಾಜಮನೆತನವೇ ಕಠಿಣ ಕ್ರಮ ಕೈಗೊಂಡಿದೆ.

ಕಿಂಗ್ ಚಾರ್ಲ್ಸ್ III ಅವರು ತಮ್ಮ ಕಿರಿಯ ಸಹೋದರನಾದ ಆಂಡ್ರ್ಯೂ ಅವರ ಎಲ್ಲಾ ರಾಜಮನೆತನದ ಬಿರುದುಗಳು, ಗೌರವಗಳು ಹಾಗೂ ಸವಲತ್ತುಗಳನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದಾರೆ.
ಬಕಿಂಗ್‌ಹ್ಯಾಮ್ ಅರಮನೆ ಪ್ರಕಟಿಸಿದ ಅಧಿಕೃತ ಹೇಳಿಕೆಯ ಪ್ರಕಾರ, ಕಿಂಗ್ ಚಾರ್ಲ್ಸ್ III ಅವರ ಆದೇಶದಿಂದ ಪ್ರಿನ್ಸ್ ಆಂಡ್ರ್ಯೂ ಇದೀಗ ಯಾವುದೇ ರಾಜಮನೆತನದ ಬಿರುದನ್ನು ಹೊಂದಿಲ್ಲ. “ಪ್ರಿನ್ಸ್”, “ಡ್ಯೂಕ್ ಆಫ್ ಯಾರ್ಕ್”, “ಅರ್ಲ್ ಆಫ್ ಇನ್ವರ್ನೆಸ್” ಮತ್ತು “ಬ್ಯಾರನ್ ಕಿಲ್ಲಿಲೀಗ್” ಸೇರಿದಂತೆ ಎಲ್ಲ ಬಿರುದುಗಳನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, ಅವರಿಗೆ “ಹಿಸ್ ರಾಯಲ್ ಹೈನೆಸ್” ಎಂಬ ಗೌರವ ಕರೆಯುವ ಹಕ್ಕನ್ನೂ ರದ್ದುಪಡಿಸಲಾಗಿದೆ. ಈಗ ಅವರು ಕೇವಲ “ಆಂಡ್ರ್ಯೂ ಮೌಂಟ್‌ಬ್ಯಾಟನ್ ವಿಂಡ್ಸರ್” ಎಂದು ಗುರುತಿಸಲ್ಪಡುವರು ಎಂದು ತಿಳಿಸಿದೆ.
ರಾಜಮನೆತನದ ಸದಸ್ಯನಾಗಿ ನೀಡಲಾಗಿದ್ದ ಪ್ರತಿಷ್ಠಿತ ಗೌರವಗಳು ಕೂಡ ಕಳೆದುಕೊಂಡಿವೆ. “ಆರ್ಡರ್ ಆಫ್ ದ ಗಾರ್ಟರ್” ಮತ್ತು “ನೈಟ್ ಗ್ರ್ಯಾಂಡ್ ಕ್ರಾಸ್ ಆಫ್ ದ ವಿಕ್ಟೋರಿಯನ್ ಆರ್ಡರ್” ಸೇರಿದಂತೆ ಹಲವಾರು ಗೌರವಗಳನ್ನು ಕಿಂಗ್ ಚಾರ್ಲ್ಸ್ ವಜಾಗೊಳಿಸಿದ್ದಾರೆ. ಪ್ರಿನ್ಸ್ ಆಂಡ್ರ್ಯೂ ಅವರು ಕೆಲ ಬಿರುದುಗಳನ್ನು ಸ್ವಯಂ ತ್ಯಜಿಸಿದ್ದರೂ, ಉಳಿದ ಎಲ್ಲ ಬಿರುದುಗಳನ್ನು ಇದೀಗ ರಾಜನ ಆದೇಶದಿಂದ ಕಳೆದುಕೊಂಡಿದ್ದಾರೆ.
ಈ ನಿರ್ಧಾರದ ಭಾಗವಾಗಿ, ಕಿಂಗ್ ಚಾರ್ಲ್ಸ್ ಅವರು ತಮ್ಮ ಸಹೋದರನಿಗೆ ರಾಜಮನೆತನದ ವಸತಿ “ವಿಂಡ್ಸರ್ ಲಾಡ್ಜ್”ನಿಂದ ನಿರ್ಗಮಿಸಲು ಸೂಚನೆ ನೀಡಿದ್ದಾರೆ. ಬಕಿಂಗ್‌ಹ್ಯಾಮ್ ಅರಮನೆಯ ಪ್ರಕಟಣೆಯ ಪ್ರಕಾರ, ಆಂಡ್ರ್ಯೂ ಅವರನ್ನು ರಾಜಮನೆತನದ ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ದೂರವಿಡಲಾಗುತ್ತದೆ. ಮುಂದೆ ಯಾವುದೇ ಅಧಿಕೃತ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವುದಿಲ್ಲ.
ಆಂಡ್ರ್ಯೂ ಅವರ ಮಾಜಿ ಪತ್ನಿ ಸಾರಾ ಫರ್ಗುಸನ್ ಅವರು ಕೆಲವು ಬಿರುದುಗಳನ್ನು ಕಳೆದುಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ವಿಂಡ್ಸರ್ ಲಾಡ್ಜ್‌ನಿಂದ ಹೊರಹೋಗಲಿದ್ದಾರೆ. ವರದಿಗಳ ಪ್ರಕಾರ, ಆಂಡ್ರ್ಯೂ ಈಗ ನಾರ್ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ಗೆ ಸ್ಥಳಾಂತರಗೊಳ್ಳಲಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಖಾಸಗಿ ಜೀವನವನ್ನೇ ಆಯ್ಕೆಮಾಡಲಿದ್ದಾರೆ.
ಜೆಫ್ರಿ ಎಪ್ಸ್ಟೀನ್ ಹಗರಣದ ನೆರಳು:
ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅಮೆರಿಕಾದಲ್ಲಿ ಅಪ್ರಾಪ್ತ ವಯಸ್ಕರ ಶೋಷಣೆಯ ಪ್ರಕರಣಗಳಲ್ಲಿ ದೋಷಿಯಾಗಿ ಪತ್ತೆಯಾಗಿದ್ದ. ಆಂಡ್ರ್ಯೂ ಅವರೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಾದಿ ವರ್ಜೀನಿಯಾ ರಾಬರ್ಟ್ಸ್ ಗಿಯುಫ್ರೆ ಆರೋಪಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದ ಬಳಿಕ ವಿಶ್ವದಾದ್ಯಂತ ಆಂಡ್ರ್ಯೂ ವಿರುದ್ಧ ತೀವ್ರ ವಿರೋಧ ವ್ಯಕ್ತವಾಯಿತು. ಅವರು ಆರೋಪಗಳನ್ನು ತಳ್ಳಿ ಹಾಕಿದ್ದರೂ, ರಾಜಮನೆತನದ ಕೀರ್ತಿ ಹಾಳಾಗುತ್ತಿರುವುದರಿಂದ ಕಿಂಗ್ ಚಾರ್ಲ್ಸ್ ಕಠಿಣ ನಿರ್ಧಾರ ಕೈಗೊಂಡಿದ್ದಾರೆ