ರಾಜ್ಯದಲ್ಲಿ 8-12ನೇ ತರಗತಿಗೆ ಲೈಂಗಿಕ ಶಿಕ್ಷಣ (ಸೆಕ್ಸ್ ಎಜುಕೇಶನ್)ಕಡ್ಡಾಯ

ಬೆಂಗಳೂರು : ರಾಜ್ಯದ ಎಲ್ಲಾ 8-12ನೇ ತರಗತಿ ಮಕ್ಕಳಿಗೆ 2025-2026ನೇ ಶೈಕ್ಷಣಿಕ ಸಾಲಿನಿಂದ ನೈತಿಕ ಮೌಲ್ಯದ ಶಿಕ್ಷಣ ಬೋಧನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನ ಪರಿಷತ್ನಲ್ಲಿ ಹದಿಹರೆದಯ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಇತ್ತೀಚೆಗೆ ಸುದೀರ್ಘ ಚರ್ಚೆ ನಡೆದಿತ್ತು. ಆಡಳಿತ ಹಾಗೂ ಪ್ರತಿಪಕ್ಷಗಳ ಅನೇಕ ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯ, ಸಲಹೆ ಹಾಗೂ ಸೂಚನೆಗಳನ್ನು ಸರ್ಕಾರಕ್ಕೆ ನೀಡಿದ್ದರು.
ಈ ಸಂಬಂಧ ಬುಧವಾರ ಪರಿಷತ್ತಿಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು.
ಈ ಬಾರಿ ಶೈಕ್ಷಣಿಕ ವರ್ಷದಿಂದ ವಾರದಲ್ಲಿ ಎರಡು ಅವಧಿಯಲ್ಲಿ ನೈತಿಕ ಮೌಲ್ಯದ ಶಿಕ್ಷಣ ಬೋಧನೆಯನ್ನು ಕಡ್ಡಾಯ ವಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಜೊತೆಗೆ ಈ ಸಂಬಂಧ ಪರೀಕ್ಷೆಯನ್ನೂ ನಡೆಸಲಾಗುವುದು ಎಂದು ತಿಳಿಸಿದ್ಧಾರೆ.
ಇನ್ನು ನೈತಿಕ ಮೌಲ್ಯದ ಶಿಕ್ಷಣದ ಜೊತೆಗೆ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ 8ರಿಂದ 12ನೇ ತರಗತಿ ಮಕ್ಕಳಿಗೆ ಕಡ್ಡಾಯವಾಗಿ ವಾರದಲ್ಲಿ 2 ದಿನ ಲೈಂಗಿಕ ಶಿಕ್ಷಣ ನೀಡಲಾಗುವುದು. ಲೈಂಗಿಕ ಶಿಕ್ಷಣ ಎಂದರೆ ತಪ್ಪಾಗಿ ಭಾವಿಸುವಂತಿಲ್ಲ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು, ಸಹಜವಾಗಿ ಆಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದು ವಿವರಿಸಿದ್ದಾರೆ.