ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಸರಣಿ ಅಪಘಾತ: ಇವಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ 9 ವಾಹನಗಳು ಜಖಂ

ಬೆಂಗಳೂರು: ಇವಿ ಬಸ್ (EV Bus) ಚಾಲಕನ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತ ಸಂಭವಿಸಿ, 9 ವಾಹನಗಳು ಜಖಂಗೊಂಡಿರುವ ಘಟನೆ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಮುಂಭಾಗ ನಡೆದಿದೆ.

ಬೆಳಗ್ಗೆ 11:30ರ ಸುಮಾರಿಗೆ ಸಿಗ್ನಲ್‌ನಲ್ಲಿ ವಾಹನಗಳು ನಿಂತಿದ್ದಾಗ ಏಕಾಏಕಿ ಬಸ್ ನುಗ್ಗಿದ ಪರಿಣಾಮ ಮುಂಭಾಗದಲ್ಲಿದ್ದ 4 ಕಾರು, 4 ಆಟೋ ಒಂದು ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ವಾಹನಗಳು ಸಂಪೂರ್ಣ ಜಖಂ ಆಗಿದ್ದು, ಅದೃಷ್ಟವಶಾತ್ ವಾಹನಗಳಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವಿ ಬಸ್ ಚಾಲಕನನ್ನ ವಶಕ್ಕೆ ಪಡೆಯಲಾಗಿದೆ. ಘಟನೆ ಬಳಿಕ ಡ್ಯಾಮೇಜ್ ಆದ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದು, ಗುತ್ತಿಗೆ ಆಧಾರದಲ್ಲಿ ಯರ‍್ಯಾರನ್ನೋ ಚಾಲಕರಾಗಿ ತೆಗೆದುಕೊಂಡಿರುವ ಕಾರಣ ಹೀಗೆಲ್ಲ ಆಗುತ್ತಿದೆ, ಜನ ಹೇಗೆ ನಂಬಿಕೆ ಇಟ್ಟು ಬಸ್ ಹತ್ತೋದು? ನಮ್ಮ ನಷ್ಟಕ್ಕೆ ಹೊಣೆ ಯಾರೆಂದು ಕಿಡಿಕಾರಿದ್ದಾರೆ.