ಟೀಂ ಇಂಡಿಯಾಗೆ ಸರಣಿ ಸೋಲು: ಅಡಿಲೇಡ್ ಏಕದಿನದಲ್ಲಿ ಆಸೀಸ್ ವಿರುದ್ಧ ಭಾರತಕ್ಕೆ ಮತ್ತೊಂದು ಸೋಲು; 2-0 ಅಂತರದಲ್ಲಿ ಆಸ್ಟ್ರೇಲಿಯಾ ಸರಣಿ ವಶ

ಅಡಿಲೇಡ್: ಮ್ಯಾಥ್ಯೂ ಶಾರ್ಟ್, ಕೂಪರ್ ಕಾನೋಲಿ ಫಿಫ್ಟಿ ಆಟ ಮತ್ತು ಆಡಮ್ ಜಂಪಾ ಬೌಲಿಂಗ್ ನೆರವಿನಿಂದ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಮತ್ತೊಂದು ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಗುರುವಾರ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಆಸೀಸ್ ಬೌಲರ್‌ಗಳನ್ನು ಎದುರಿಸಲು ತಿಣುಕಾಡಿದ ಟೀಂ ಇಂಡಿಯಾ ಆಟಗಾರರು ನಿಗದಿತ ಓವರ್‌ಗೆ 9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದರು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 2 ವಿಕೆಟ್‌ಗಳ ಜಯಗಳಿಸಿದೆ.
ಭಾರತ ತಂಡದ ಪ್ರಮುಖ ಬ್ಯಾಟರ್‌ಗಳು ಎರಡನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಕ್ಯಾಪ್ಟನ್ ಶುಭಮನ್ ಗಿಲ್ ಕೇವಲ 9 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಎರಡೂ ಪಂದ್ಯಗಳಲ್ಲಿ ಶೂನ್ಯ ಸುತ್ತಿ ಕೆಟ್ಟ ದಾಖಲೆ ಬರೆದಿದ್ದಾರೆ. ಕೆಎಲ್ ರಾಹುಲ್ (11) ನೀರಸ ಪ್ರದರ್ಶನ ತೋರಿದ್ದಾರೆ.
ಇಂದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ನಂತರದಲ್ಲಿ ಅಬ್ಬರಿಸಿದರು. 97 ಬಾಲ್‌ಗೆ 2 ಸಿಕ್ಸರ್, 7 ಫೋರ್‌ಗಳೊಂದಿಗೆ 73 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ (61) ಕೂಡ ಉತ್ತಮ ಪ್ರದರ್ಶನ ನೀಡಿ ಅರ್ಧಶತಕ ಗಳಿಸಿದರು. ಅಕ್ಷರ್ ಪಟೇಲ್ (44) ಜವಾಬ್ದಾರಿಯುತ ಆಟವಾಡಿದರು. ಇವರ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಬೌಲರ್‌ಗಳಾದ ವಾಷಿಂಗ್ಟನ್ ಸುಂದರ್ (12), ಹರ್ಷಿತ್ ರಾಣಾ (24), ಅರ್ಷದೀಪ್ ಸಿಂಗ್ (13) ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಆಡಮ್ ಜಂಪಾ 4 ವಿಕೆಟ್ ಕಿತ್ತು ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಜೇವಿಯರ್ ಬಾರ್ಟ್ಲೆಟ್ 3, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಿತ್ತರು.
ನಂತರ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನೆರವಾದರು. ಮ್ಯಾಥ್ಯೂ ಶಾರ್ಟ್ (74), ಕೂಪರ್ ಕಾನೋಲಿ (61) ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ತಂಡದ ಪರ ಟ್ರಾವಿಸ್ ಹೆಡ್ 28, ಮ್ಯಾಟ್ ರೆನ್ಶಾ 30, ಮಿಚೆಲ್ ಓವನ್ 36 ರನ್ ಗಳಿಸಿದರು.
ಟೀಂ ಇಂಡಿಯಾ ಪರ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.