ಚಿಲ್ಲಿ ಚಿಕನ್ ಹೆಸರಿನಲ್ಲಿ ಬಾವಲಿ ಮಾಂಸ ಮಾರಾಟ: ತಮಿಳುನಾಡಿನಲ್ಲಿ ಇಬ್ಬರು ಬಂಧನ!

ಹಣ್ಣುಗಳನ್ನು ತಿನ್ನುವ ನಿಶಾಚರಿ ಬಾವಲಿಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ಕೋಳಿ ಮಾಂಸದ ಜೊತೆ ಮಿಶ್ರಣ ಮಾಡಿ ಚಿಕನ್ ಚಿಲ್ಲಿ ಎಂದು ಹೇಳಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಹಾಗೂ ಆಹಾರ ಸುರಕ್ಷತ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು ತಮ್ಮ ರಸ್ತೆ ಬದಿ ಫಾಸ್ಟ್‌ಫುಡ್ ಅಂಗಡಿಗಳಲ್ಲಿ ಕೋಳಿ ಮಾಂಸದ ಜೊತೆ ಈ ಬಾವಲಿ ಮಾಂಸವನ್ನು ಮಿಶ್ರಣ ಮಾಡಿ ಚಿಕನ್ ಚಿಲ್ಲಿ ಎಂದು ಮಾರಾಟ ಮಾಡುತ್ತಿದ್ದರು.

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸಾರ್ವಜನಿಕ ಆರೋಗ್ಯ ಸುರಕ್ಷತೆ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರದ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
ಸೇಲಂನ ತೋಪ್ಪುರ್ ರಾಮಸಾಮಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ನಡೆಸಿದ ದಾಳಿಯ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ಈ ಬಗ್ಗೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಿದರು. ಈ ವೇಳೆ ಮಾರಾಟಕ್ಕಾಗಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ಬಾವಲಿ ಮಾಂಸವನ್ನು ಬೇಯಿಸುತ್ತಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ 36 ವರ್ಷದ ಕಮಲ್ ಮತ್ತು 35 ವರ್ಷದ ಸೆಲ್ವಂ ಎಂಬುವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಒಮಲೂರಿನ ಡ್ಯಾನಿಶ್‌ಪೆಟ್ಟೈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಮಳಿಗೆಗಳಲ್ಲಿ ಬಾವಲಿ ಮಾಂಸವನ್ನು ಚಿಲ್ಲಿ ಚಿಕನ್ ಮತ್ತು ಇತರ ಜನಪ್ರಿಯ ಭಕ್ಷ್ಯಗಳೆಂದು ಹೇಳಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಜನರು ಇಲ್ಲಿ ಕೋಳಿ ಮಾಂಸ ಎಂದು ನಂಬಿ ಬಾವಲಿ ಮಾಂಸವನ್ನು ಸೇವಿಸಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ರೇಂಜರ್ ವಿಮಲ್ ಕುಮಾರ್ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ವನ್ಯಜೀವಿ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ದೃಷ್ಟಿಕೋನದಿಂದ ಇದು ತುಂಬಾ ಗಂಭೀರ ಅಪರಾಧ ಎಂದು ಹೇಳಿದ್ದಾರೆ. ನಾವು ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಮತ್ತು ಈ ಕಾನೂನುಬಾಹಿರ ಚಟುವಟಿಕೆಯಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂದು ನಿರ್ಧರಿಸಲು ದೊಡ್ಡ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಆರೋಗ್ಯತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬಾವಲಿಗಳ ಮಾಂಸ ಸೇವನೆಯಿಂದ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ. ಈ ಹಣ್ಣು ತಿನ್ನುವ ಬಾವಲಿಗಳು ನಿಪಾ, ಎಬೋಲಾ, ಮಾರ್ಬರ್ಗ್ ಮತ್ತು ರೇಬೀಸ್ ಸೇರಿದಂತೆ ಹಲವಾರು ಮಾರಕ ಪ್ರಾಣಿಜನ್ಯ ವೈರಸ್‌ಗಳನ್ನು ಹರಡುವುದಕ್ಕೆ ಕಾರಣವಾಗಿವೆ. ಇವುಗಳ ಮಾಂಸವನ್ನು ಸರಿಯಾಗಿ ಬೇಯಿಸದಿದ್ದರೆ ಅಥವಾ ಸರಿಯಾಗಿ ನಿರ್ವಹಿಸದಿದ್ದರೆ ಅಪಾಯ ಹೆಚ್ಚಾಗುತ್ತದೆ. ಇದು ಮಾರಕ ರೋಗಗಳು ಏಕಾಏಕಿ ಹರಡಲು ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಕಾನೂನು ಉಲ್ಲಂಘನೆಯಲ್ಲ , ಇದು ಸಂಭಾವ್ಯ ಸಾರ್ವಜನಿಕ ಆರೋಗ್ಯ ವಿಪತ್ತು ಎಂದು ಪ್ರಾಣಿಜನ್ಯ ರೋಗ ಪ್ರಸರಣದ ಬಗ್ಗೆ ತಿಳಿದಿರುವ ವೈರಾಲಜಿಸ್ಟ್ ಒಬ್ಬರು ಹೇಳಿದ್ದಾರೆ ಬಾವಲಿಗಳು ವಿಶ್ವದ ಕೆಲವು ಅಪಾಯಕಾರಿ ವೈರಸ್‌ಗಳಿಗೆ ನೈಸರ್ಗಿಕ ಆಗರವಾಗಿ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ಯಾವುದೇ ಪಶುವೈದ್ಯಕೀಯ ತಪಾಸಣೆ ಅಥವಾ ನೈರ್ಮಲ್ಯ ಪ್ರೋಟೋಕಾಲ್ ಇಲ್ಲದೆ ಅವುಗಳ ಮಾಂಸವನ್ನು ಸೇವಿಸುವುದು ವಿಪತ್ತಿಗೆ ಆಹ್ವಾನವಾಗಿದೆ ಎಂದು ಅವರು ಹೇಳಿದರು.
ಅಧಿಕಾರಿಗಳು ಸಹ ಈ ಹಿಂದೆ ವರದಿಯಾದಂತಹ ಇದೇ ರೀತಿಯ ಘಟನೆಗಳನ್ನು ಉಲ್ಲೇಖಿಸಿದ್ದಾರೆ. 2024 ರ ಆರಂಭದಲ್ಲಿ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಸೋಂಕಿತ ಬಾವಲಿ ಮಾಂಸವನ್ನು ಸೇವಿಸಿದ ನಂತರ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಭಾರತದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಈ ರೀತಿಯಾಗಿ ಅಕ್ರಮ ವನ್ಯಜೀವಿ ಮಾಂಸವನ್ನು ಸೇವಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. 2020 ರಲ್ಲಿ ರಾಮೇಶ್ವರಂನಲ್ಲಿ ಕಾಗೆ ಮಾಂಸವನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಹಾಗೆಯೇ 2021 ರಲ್ಲಿ, ಬೆಂಗಳೂರಿನಲ್ಲಿ ಇಲಿ ಮತ್ತು ನಾಯಿ ಮಾಂಸಗಳನ್ನು ಮಿಶ್ರಣ ಮಾಡಿದ ಪ್ರಕರಣಗಳು ವರದಿಯಾಗಿದ್ದವು ಹಾಗೆಯೇ 2023 ರಲ್ಲಿ ಬೆಂಗಳೂರು ರೈಲು ನಿಲ್ದಾಣದಲ್ಲಿ ಗುರುತಿಸಲಾಗದ ಮಾಂಸ ಪತ್ತೆಯಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು ಎಂಬುದನ್ನು ಅಧಿಕಾರಿಗಳು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೆನಪು ಮಾಡಿಕೊಂಡಿದ್ದಾರೆ.
ಇಬ್ಬರು ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬೇಟೆಗಾರರು ಮತ್ತು ವ್ಯಾಪಾರಿಗಳ ವ್ಯಾಪಕ ಜಾಲದೊಂದಿಗೆ ಸಂಭಾವ್ಯ ಸಂಪರ್ಕವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
