ಸೆಲ್ಫಿ ವಿಚಾರಕ್ಕೆ ಶುರುವಾದ ಕಿರಿಕ್: ಕೃಷ್ಣಾ ನದಿಗೆ ತಳ್ಳಿದ ಆರೋಪ, ನವದಂಪತಿ ವಿಚ್ಛೇದನ!

ಸೇತುವೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನವ ದಂಪತಿ ಸೆಲ್ಫಿ ವಿಚಾರಕ್ಕಾಗಿ ಜಗಳವಾಡಿದ್ದು, ಈ ವೇಳೆ ನನ್ನನ್ನು ನದಿಗೆ ತಳ್ಳಿದ್ದಾಳೆ ಎಂದು ಪತ್ನಿಯ ವಿರುದ್ಧ ಪತಿ ಆರೋಪ ಮಾಡಿರುವ ಘಟನೆ ತಾಲೂಕಿನ ಗುರ್ಜಾಪುರ ಸಮೀಪದ ಕೃಷ್ಣಾ ನದಿ ಸೇತುವೆ ಮೇಲೆ ನಡೆದಿತ್ತು.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದಲ್ಲಿ ಪತಿ-ಪತ್ನಿಯ ನಡುವಿನ ಸಂಬಂಧದಲ್ಲಿ ಈಗ ಬಿರುಕು ಮೂಡಿದ್ದು, ಪತಿ ತಾತಪ್ಪ ಮತ್ತು ಪತ್ನಿ ಗದ್ದೆಮ್ಮ ಅವರ ಪ್ರಕರಣವು ಈಗ ವಿಚ್ಛೇದನದ ಮಟ್ಟಿಗೆ ಬಂದು ತಲುಪಿದೆ.
ಕೃಷ್ಣಾ ನದಿಗೆ ತಳ್ಳಿದಳೆಂದು ಪತ್ನಿ ವಿರುದ್ಧ ಪತಿ ಕೊಲೆ ಯತ್ನ ನಡೆಸಿದ ಆರೋಪ ಹೊರಿಸಿದ್ದಾನೆ. ಆದರೆ ಈ ಪ್ರಕರಣದಲ್ಲಿ ಪತಿ-ಪತ್ನಿಯ ಆರೋಪ ಹಾಗೂ ಪ್ರತ್ಯಾರೋಪಗಳಿಂದಲೇ ಹೊಸ ಟ್ವಿಸ್ಟ್ ಬಂದಿದೆ. ನಿನ್ನೆ ರಾತ್ರಿ, ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿಯನ್ನು ನಡೆಸಿ, ಪತಿ ತಾತಪ್ಪ ಮತ್ತು ಗದ್ದೆಮ್ಮನಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ.
ಈ ವಿಚ್ಛೇದನದ ಬಳಿಕ, ಗದ್ದೆಮ್ಮ ಕುಟುಂಬವು ಮಾನ-ಮರ್ಯಾದೆಗೆ ಅಂಜಿ ಮನೆ ಬಾಗಿಲು ಮುಚ್ಚಿಕೊಂಡು ಹೊರಗೆ ಬರದೇ ಕುಳಿತುಕೊಂಡಿದೆ. ಇಂದು ಬೆಳಗ್ಗೆಯೂ ಗದ್ದೆಮ್ಮ ಕುಟುಂಬವು ಮಾಧ್ಯಮದ ಸಂಪರ್ಕಕ್ಕೆ ಸಿಗಲಿಲ್ಲ. ಗದ್ದೆಮ್ಮ ತಾಯಿ ನಾಗಮ್ಮ ಮಾಧ್ಯಮದೊಂದಿಗೆ ಮಾತನಾಡಲು ನಿರಾಕರಿಸಿದ್ದು, “ಈಗಾಗಲೇ ಮಾನ ಮರ್ಯಾದೆ ಹರಾಜಾಗಿದೆ, ನಾವು ಮತ್ತೇನು ಹೇಳುವುದಿಲ್ಲ,” ಎಂದು ಹೇಳಿದ್ದಾರೆ.
ಗುರ್ಜಾಪುರ ಬ್ರಿಡ್ಜ್ ಬ್ಯಾರೇಜ್‌ನಲ್ಲಿ ದಾಖಲಾಗಿದ ವೈರಲ್ ವಿಡಿಯೋ ಪ್ರಕರಣ:
ತಾತಪ್ಪ ಮತ್ತು ಗದ್ದೆಮ್ಮ ದಂಪತಿಯ ವಿಡಿಯೋವು ಗುರ್ಜಾಪುರ ಬ್ರಿಡ್ಜ್ ಬಳಿಯಲ್ಲಿ ವೈರಲ್ ಆಗಿತ್ತು, ಅದೇ ವಿಚಾರದಿಂದ ಇವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ವಿವಾಹದ ಬಳಿಕ ಇವರಿಬ್ಬರೂ ಹೊಂದಾಣಿಕೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಕುಟುಂಬಸ್ಥರು ಹತ್ತಿರದವರ ಎದುರು ಒಪ್ಪಿಕೊಂಡಿದ್ದಾರೆ. ಹೀಗಾಗಿ, ತಾತಪ್ಪ ಮತ್ತು ಗದ್ದೆಮ್ಮ ಇಬ್ಬರೂ ಹಿರಿಯರ ಸಮ್ಮುಖದಲ್ಲಿ 500 ರೂ. ಬಾಂಡ್ ಮೇಲೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದೇ ಮೂಲಕ ದಂಪತಿಯ ದಾಂಪತ್ಯಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ.
ಏನಿದು ಪ್ರಕರಣ:
ತಾಲೂಕಿನ ಶಕ್ತಿನಗರದ ಲೇಬರ್ ಕಾಲೊನಿ ನಿವಾಸಿ ಪತಿ ತಾತಪ್ಪ ಹಾಗೂ ಪತ್ನಿ ಗದ್ದೆಮ್ಮ ಜೊತೆಗೂಡಿ ರಾಯಚೂರು-ಯಾದಗಿರಿ ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಗುರ್ಜಾಪುರ ಸೇತುವೆ ಮೇಲೆ ಬೈಕ್‌ನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿ ಸೇತುವೆ ಮೇಲಿಂದ ಪತಿಯನ್ನು ದೂಡಿ ನದಿಗೆ ಹಾಕಿದಳು ಎಂಬುದು ಆರೋಪ. ನದಿಗೆ ಬಿದ್ದ ಪತಿ ಕಲ್ಲು ಬಂಡೆಗಳ ಮೇಲೆ ನಿಂತು ಜೀವ ರಕ್ಷಿಸುವಂತೆ ಜೋರಾಗಿ ಕೂಗಾಡಿದ್ದು, ತಕ್ಷಣ ಸ್ಥಳೀಯರು ಹಗ್ಗ ಕಟ್ಟಿ ಆತನನ್ನು ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದಾರೆ. ಇಷ್ಟೆಲ್ಲಾ ಘಟನೆ ನಡೆದರೂ ಸಹ ಪತ್ನಿ ಫೋನಿನಲ್ಲಿ ಮಾತನಾಡುತ್ತಾ ಸುಮ್ಮನಿದ್ದಳು. ಸುರಕ್ಷಿತವಾಗಿ ಮೇಲಕ್ಕೆ ಬಂದ ಪತಿ ಚಿತ್ರ ಕ್ಲಿಕ್ಕಿಸುವಾಗ ನದಿಗೆ ದಬ್ಬಿದ್ದಾಳೆ ಎಂದು ಆರೋಪಿಸಿದ್ದಾನೆ. ತಕ್ಷಣ ಫೋನಿನಲ್ಲಿ ಸಂಬಂಧಿಕರ ಜೊತೆ ಮಾತನಾಡಿ, ನನ್ನನ್ನು ಕೊಲ್ಲಲು ನದಿಗೆ ದಬ್ಬಿದ್ದಾಳೆ ಎಂದು ದೂರಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿರಸದಿಂದ ಕುದಿಯುತ್ತಿದ್ದ ನವದಂಪತಿಗೆ ಬುದ್ಧಿವಾದ ಹೇಳಿ, ಸಮಾಧಾನಪಡಿಸಿ ಕಳುಹಿಸಿದ್ದರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
