ಕಾರ್ಕಳ ಪರಶುರಾಮ ಥೀಂ ಪಾರ್ಕ್‌ನಲ್ಲಿ ಕಳ್ಳತನ: ತಾಮ್ರದ ಹೊದಿಕೆ ಹೊತ್ತೊಯ್ದ ಖದೀಮರು; ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಸುನಿಲ್ ಕುಮಾರ್ ಆಕ್ರೋಶ!

ಉಡುಪಿ: ವಿವಾದಗಳ ಸುಳಿಯಲ್ಲಿ ಸಿಲುಕಿ ಪಾಳುಬಿದ್ದಿರುವ ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರು ಉಮಿಕಲ್ ಬೆಟ್ಟದಲ್ಲಿರುವ ‘ಪರಶುರಾಮ ಥೀಂ ಪಾರ್ಕ್’ನಲ್ಲಿ ಈಗ ಕಳ್ಳರ ಕೈಚಳಕ ನಡೆದಿದೆ. ಕಟ್ಟಡದ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು, ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಕಿತ್ತು ಹೊತ್ತೊಯ್ದಿದ್ದಾರೆ.


ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಾಣವಾದ ಈ ಪಾರ್ಕ್, ಪ್ರತಿಮೆ ಹಗರಣದ ಆರೋಪ ಮತ್ತು ತನಿಖೆಯ ಕಾರಣದಿಂದ ಸದ್ಯ ಅನುದಾನವಿಲ್ಲದೆ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಪ್ರವಾಸಿ ತಾಣವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಘಟನೆಯ ಬೆನ್ನಲ್ಲೇ ಸುಮಾರು ಎರಡೂವರೆ ವರ್ಷಗಳ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುನಿಲ್ ಕುಮಾರ್, ಅಲ್ಲಿನ ಅವ್ಯವಸ್ಥೆ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಕಳ್ಳತನ ಮತ್ತು ದುಃಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣ ಎಂದು ಕಿಡಿಕಾರಿದ ಅವರು, ರಾಜಕೀಯ ದ್ವೇಷಕ್ಕಾಗಿ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ 4.5 ಕೋಟಿ ರೂಪಾಯಿ ಹಣವನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು. “ಇದು ಫೈಬರ್ ಪ್ರತಿಮೆ ಅಲ್ಲ ಎಂಬುದು ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿದ್ದು, ವಿವಾದಗಳಿಗೆ ಈಗ ತೆರೆ ಬಿದ್ದಿದೆ. ಇನ್ನಾದರೂ ಸರ್ಕಾರ ರಾಜಕೀಯ ಬಿಟ್ಟು ಹಣ ಬಿಡುಗಡೆ ಮಾಡಲಿ ಮತ್ತು ಮುಂದಿನ ಮಸ್ತಕಾಭಿಷೇಕದ ವೇಳೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಿ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
