ಕಸದ ವಿವಾದ :ಗುಜರಿ ಅಂಗಡಿ ಮಾಲಕನಿಂದ ಪೌರಕಾರ್ಮಿಕನಿಗೆ ಹಲ್ಲೆ, ಜಾತಿ ನಿಂದನೆ – ಪ್ರಕರಣ ದಾಖಲು

ಮಂಗಳೂರು : ಗುಜರಿ ಅಂಗಡಿ ಮಾಲಕನೊಬ್ಬ ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕನೊಬ್ಬನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಬಿಕರ್ನಕಟ್ಟೆಯಲ್ಲಿ ನಿನ್ನೆ (ಫೆ.26) ನಡೆದಿದೆ.
ಕದ್ರಿ ಶಿವಭಾಗ್‌ನ ನಿವಾಸಿ ಶಿವಪ್ಪ ನಿನ್ನೆ ಬೆಳಗ್ಗೆ 11:36ಕ್ಕೆ ಬಿಕರ್ನಕಟ್ಟೆ ಪೆಟ್ರೋಲ್‌ಪಂಪ್ ಹತ್ತಿರ ತಲುಪುವಾಗ ಅವರ ಕಸ ಸಾಗಾಟದ ವಾಹನವನ್ನು ಅಡ್ಡಗಟ್ಟಿದ ಗುಜರಿ ವ್ಯಾಪಾರಿಯೊಬ್ಬ , ಗೋಣಿ ಚೀಲದಲ್ಲಿ ತುಂಬಿಸಲಾದ ಕಸವನ್ನು ವಾಹನಕ್ಕೆ ಎಸೆಯಲು ಯತ್ನಿಸಿದ್ದಾನೆ. ವಾಹನಕ್ಕೆ ಹಸಿ ಕಸ-ಒಣಕಸ ಎಂದು ವಿಂಗಡಿಸದೆ ವ್ಯಾಪಾರಿಯು ನೇರವಾಗಿ ಕಸವನ್ನು ಹಾಕಲು ಬಂದಾಗ ಪೌರ ಕಾರ್ಮಿಕ ಶಿವಪ್ಪ ವಿರೋಧಿಸುತ್ತಾನೆ. ಹಾಗಾಗಿ ವ್ಯಾಪಾರಿಯು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಧರಿಸಿದ್ದ ಬಟ್ಟೆಯನ್ನು ಹರಿದು ಹಾಕಿ, ಜೀವ ಬೆದರಿಕೆ ಹಾಕಿದ್ದಾನೆ.

ಈ ಘಟನೆಗೆ ಸಂಬಂಧಿಸಿ ಕದ್ರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.