ಪತ್ರಕರ್ತೆಯ ಕಾರು ಬೆನ್ನಟ್ಟಿ ಮರದ ತುಂಡಿನಿಂದ ಗಾಜು ಒಡೆದ ಸ್ಕೂಟಿ ಸವಾರರು; 5 ತಂಡಗಳಿಂದ ಆರೋಪಿಗಳ ಹುಡುಕಾಟ

ನವದೆಹಲಿ: ಪತ್ರಕರ್ತೆಯೊಬ್ಬರನ್ನು ಶುಕ್ರವಾರ ನಸುಕಿನ ವೇಳೆ ನೋಯ್ಡಾದ ಸೆಕ್ಟರ್ -129 ನಲ್ಲಿ ಇಬ್ಬರು ದುಷ್ಕರ್ಮಿಗಳು ಬೆನ್ನಟ್ಟಿ ಕಾರಿನ ಗಾಜು ಧ್ವಂಸ ಗೈದಿರುವ ಕಳವಳಕಾರಿ ಘಟನೆ ನಡೆದಿದೆ.

ಎನ್‌ಡಿಟಿವಿ 24×7 ವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ನಿರ್ಮಾಪಕಿ ತಮ್ಮ ಕಾರಿನಲ್ಲಿ ಕಚೇರಿಯಿಂದ ಹೊರಟು ವಸಂತ್ ಕುಂಜ್‌ನಲ್ಲಿರುವ ಮನೆಗೆ ಹೋಗುತ್ತಿದ್ದಾಗ 12.45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ
ಕಾರಿನಲ್ಲಿ ತೆರಳುತ್ತಿದ್ದಾಗ ಹಿಂಬಾಸಿದ ಇಬ್ಬರು ಸ್ಕೂಟಿ ಸವಾರರು ಅಡ್ಡಗಟ್ಟಲು ಯತ್ನಿಸಿದ್ದಾರೆ. ಆ ಬಳಿಕ ಪತ್ರಕರ್ತೆ ಫೋನ್ ಮೂಲಕ ರೆಕಾರ್ಡ್ ಮಾಡಲು ಆರಂಭಿಸಿದ್ದಾರೆ. ವಾಹನಗಳಿದ್ದ ಕಾರಣ ಅನಿವಾರ್ಯವಾಗಿ ಕಾರನ್ನು ನಿಧಾನ ಮಾಡಿದಾಗ ಸ್ಕೂಟಿಯ ಹಿಂದೆ ಕುಳಿತಿದ್ದವನು ಇಳಿದು ಕಾರಿನ ಮುಂಭಾಗದ ಕಿಟಕಿಗೆ ಬಡಿದು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ.
ಬಳಿಕ ಕಾರನ್ನು ವೇಗವಾಗಿ ಚಲಾಯಿಸಿ ಡಿಎನ್‌ಡಿ ಫ್ಲೈವೇ ತಲುಪಿದರೂ ಇಬ್ಬರು ಹಿಂಬಾಲಿಸುತ್ತಲೇ ಇದ್ದರು. ನಾನು ಪತ್ರಕರ್ತೆ ಸಹೋದ್ಯೋಗಿಯನ್ನು ಸಂಪರ್ಕಿಸಿ ಏನು ಮಾಡಬೇಕೆಂದು ಕೇಳಿದ್ದಾರೆ. ಅವರು, ಚಾಲನೆ ಮಾಡುತ್ತಲೇ ಇರಿ ಮತ್ತು ನಿಲ್ಲಿಸಬೇಡಿ ಎಂದು ಸಲಹೆ ನೀಡಿದ್ದಾರೆ.
ಸ್ಕೂಟಿಯ ಹಿಂದಿನ ವ್ಯಕ್ತಿ ಮರದ ತುಂಡನ್ನು ಹೊರತೆಗೆದು ಕಾರಿನ ಹಿಂಭಾಗದ ಗಾಜು ಮತ್ತು ಎಡ ಹಿಂಭಾಗದ ಕಿಟಕಿಯನ್ನು ಒಡೆದಿದ್ದಾನೆ ಎಂದು ಪತ್ರಕರ್ತೆ ಘಟನೆ ಕುರಿತು ವಿವರಿಸಿದ್ದಾರೆ.
ಪತ್ರಕರ್ತೆ ಆಶ್ರಮ ಪ್ರದೇಶವನ್ನು ತಲುಪುತ್ತಿದ್ದಂತೆ, ಪೊಲೀಸರಿಗೆ ಕರೆ ಮಾಡಿ ತನ್ನ ಸ್ಥಳವನ್ನು ತಿಳಿಸಿದ್ದಾರೆ. ಲಜಪತ್ ನಗರ ತಲುಪಿದ ಕೂಡಲೇ, ಟ್ಯಾಕ್ಸಿ ಚಾಲಕರ ಗುಂಪೊಂದು ತೊಂದರೆಯಲ್ಲಿರುವುದನ್ನು ಗಮನಿಸಿ ಸಹಾಯಕ್ಕೆ ಧಾವಿಸಿ ಕಾರನ್ನು ಪಕ್ಕಕ್ಕೆ ನಿಲ್ಲಿಸಲು ಹೇಳಿದ್ದಾರೆ. ಲಜಪತ್ ನಗರದ ಗುಪ್ತಾ ಮಾರುಕಟ್ಟೆಯಲ್ಲಿ ಕಾರನ್ನು ನಿಲ್ಲಿಸಿದ ಬಳಿಕ ಹಿಂಬಾಲಿಸುತ್ತಿದ್ದ ಸ್ಕೂಟಿಯಲ್ಲಿದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ವರದಿಯಾದ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪ್ರಕರಣ ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ 5 ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗುತ್ತಿದ್ದು, ಆರೋಪಿಗಳಿಬ್ಬರು ಯಾರು ಎಂಬುದನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.