ಸತ್ಯಪಾಲ್ ಮಲಿಕ್ ಅವರ ಕೊನೆಯ ಪೋಸ್ಟ್ ವೈರಲ್: ‘ನನಗೆ 150 ಕೋಟಿ ರೂ. ಲಂಚದ ಆಮಿಷವಿತ್ತು’

‘ನನಗೆ 150 ಕೋಟಿ ರೂ. ಲಂಚ ಆಮಿಷ ಒಡ್ಡಿದ್ದರು’ – ಐಸಿಯುನಿಂದಲೇ ಸತ್ಯಪಾಲ್ ಮಲಿಕ್ ಮ
‘ನನಗೆ 150 ಕೋಟಿ ರೂ. ಲಂಚ ಆಮಿಷ ಒಡ್ಡಿದ್ದರು’ – ಐಸಿಯುನಿಂದಲೇ ಸತ್ಯಪಾಲ್ ಮಲಿಕ್ ಮಾಡಿದ್ದ ಕಡೆಯ ಪೋಸ್ಟ್ ವೈರಲ್
ನವದೆಹಲಿ: ನನ್ನ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಈ ಸಂದರ್ಭದಲ್ಲಿ ನಾನು ನನ್ನ ದೇಶಬಾಂಧವರಿಗೆ ಒಂದು ವಿಚಾರವನ್ನು ಹೇಳಲೇಬೇಕು. ನಾನು ಜಮ್ಮು ಕಾಶ್ಮೀರದ ರಾಜ್ಯಪಾಲ ಆಗಿದ್ದಾಗ 150-150 ಕೋಟಿ ರೂ.ಗಳ ಆಮಿಷ ಒಡ್ಡಲಾಗಿತ್ತು. ಆದರೆ, ನಾನು ಅದನ್ನು ನಯವಾಗಿ ತಿರಸ್ಕರಿಸಿದ್ದೆ.

ಇದು ಆ. 5ರಂದು ನಿಧನರಾದ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಕಡೆಯ ಸೋಷಿಯಲ್ ಮೀಡಿಯಾ ಪೋಸ್ಟ್.
ಕಿಡ್ನಿಗಳ ಅನಾರೋಗ್ಯದಿಂದ ಸತ್ಯಪಾಲ್ ಮಲಿಕ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿತ್ತು. ಆಗ, ಜು. 7ರಂದು ಅಲ್ಲಿಂದಲೇ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯೊಂದರಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದೇ ಕಡೆಯ ಪೋಸ್ಟ್. ಅದರಲ್ಲಿ ಅವರು ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡಿರುವ ಅವರು, ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಬಂದಿದ್ದ ಆಮಿಷಗಳ ಬಗ್ಗೆ, ಈಗ ತಮ್ಮನ್ನು ಭ್ರಷ್ಟಾಚಾರದ ಆರೋಪದಡಿ ಸಿಕ್ಕಿಹಾಕಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಆ ಪೋಸ್ಟ್ ಹೀಗಿದೆ.
“ನಾನು ಜಮ್ಮು ಕಾಶ್ಮೀರದ ರಾಜ್ಯಪಾಲನಾಗಿದ್ದಾಗ ನನಗೆ 150-150 ಕೋಟಿ ರೂ.ಗಳ ಆಮಿಷವನ್ನು ಒಡ್ಡಲಾಗಿತ್ತು. ಆದರೆ, ನಾನು ಚೌಧರಿ ಚರಣ್ ಸಿಂಗ್ ಅವರ ಅನುಯಾಯಿ. ಅವರ ತತ್ವಾದರ್ಶಗಳನ್ನು ನಂಬಿಕೊಂಡು ಬೆಳೆದವನು. ಅದೇ ಕಾರಣಕ್ಕಾಗಿ ನಾನು ಅಂಥ ಆಮಿಷಗಳನ್ನು ನಿರಾಕರಿಸಿದ್ದೆ. ಇದೀಗ, ನನ್ನ ವಿರುದ್ಧ 500 ಕೋಟಿ ರೂ.ಗಳ ಭ್ರಷ್ಟಾಚಾರ ಆರೋಪ ಹೊರಿಸಿ, ಆರೋಪ ಪಟ್ಟಿಯನ್ನು ಸಿದ್ಧಪಡಿಸಿದೆ. ಹಣಕ್ಕೆ ಆಸೆ ಪಡೆದಂಥ ರಾಜಕಾರಣಿಯಾಗಿದ್ದ ನನ್ನಂಥವನ ಮೇಲೆ ಹೀಗೆ ಆರೋಪ ಹೊರಿಸಿರುವುದು ಷಡ್ಯಂತ್ರವಲ್ಲದೆ ಮತ್ತೇನು” ಎಂದು ಅವರು ಹೇಳಿದ್ದಾರೆ.
ನಂತರ, “ನಾನು ಯಾವತ್ತಾದರೂ ದನಿಯೆತ್ತಿ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದೇನೆಂದರೆ ಅದು ಸಮಾಜಮುಖಿ ಚಿಂತನೆಗಳಿಂದ ಮಾತ್ರ. ಯಾವುದೇ ವೈಯಕ್ತಿಕ ಕಾರಣವಲ್ಲ. ಹಿಂದೆ, ನಾನು ಜಮ್ಮು ಕಾಶ್ಮೀರದ ರಾಜ್ಯಪಾಲನಾಗಿದ್ದಾಗ ಪುಲ್ವಾಮಾ ದಾಳಿ ನಡೆಯಿತು. ನಾನು ಆ ಘಟನೆಯ ತನಿಖೆ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದೆ. ಆ ತನಿಖೆ ಇದುವರೆಗೆ ನಡೆದಿಲ್ಲ. ಇಷ್ಟೇ ಅಲ್ಲದೆ, ಕಳೆದ ವರ್ಷ ನಡೆದಿದ್ದ ಮಹಿಳಾ ಕುಸ್ತಿಪಟುಗಳ ಹೋರಾಟ ಹಾಗೂ ರೈತರ ಹೋರಾಟಗಳಿಗೂ ದನಿಗೂಡಿಸಿದ್ದೆ. ಅದೂ ಸಹ ಸಾಮಾಜಿಕ ಕಳಕಳಿಯಿಂದಲೇ ಮಾಡಿದ್ದು. ಆದರೆ, ಇದ್ಯಾವುದನ್ನೂ ಕೇಂದ್ರ ಸರ್ಕಾರ ಲೆಕ್ಕ ಇಟ್ಟುಕೊಂಡಿಲ್ಲ. ನನ್ನ ಮೇಲೆ ಷಡ್ಯಂತ್ರ ಮಾಡುತ್ತಿದೆ” ಎಂದು ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.
ಅವರು ಅನಾರೋಗ್ಯದಿಂದ ಚೇತರಿಸಿಕೊಂಡು ಬಂದಿದ್ದರೆ ಆ ಪೋಸ್ಟ್ ಬಗ್ಗೆ ವಿವರಣೆ ಕೊಡುವಂತೆ ಮಾಧ್ಯಮಗಳು ಕೇಳುತ್ತಿದ್ದವೋ ಏನೋ.. ಆದರೆ ವಿವರಣೆ ಕೇಳುವ ಅವಕಾಶ ಮಾಧ್ಯಮಗಳಿಗೆ ಸಿಗಲಿಲ್ಲ. ವಿವರಣೆ ಕೊಡುವ ಅವಕಾಶ ಅವರಿಗೂ ಸಿಗಲಿಲ್ಲ.
