‘ಅಂದು ಸಂಜಯ್ ದತ್ ಮಾಹಿತಿ ನೀಡಿದ್ದರೆ 257 ಪ್ರಾಣ ಉಳಿಸಬಹುದಿತ್ತು’-ಉಜ್ವಲ್ ನಿಕಮ್

ಸಂಜಯ್ ದತ್ , ಬಾಲಿವುಡ್ನ ಸ್ಟಾರ್ ನಟ. ಅದರ ಜೊತೆಗೆ ವಿವಾದಾತ್ಮಕ ನಟ ಸಹ ಹೌದು. ಮಾದಕ ವ್ಯಸನ, ಡೇಟಿಂಗ್ ಚಟ, ನಟಿಯರೊಂದಿಗೆ ಸಂಬಂಧ ಇದೆಲ್ಲದರ ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ, ಭೂಗತ ಲೋಕದವರ ಜೊತೆಗೆ ನಂಟು ಹೀಗೆ ಒಂದರ ಬಳಿಕ ಒಂದು ವಿವಾದಗಳಲ್ಲಿ ಸಂಜಯ್ ದತ್ ಸಿಲುಕಿದ್ದರು.

ಸಂಜಯ್ ದತ್ ಬಾಲಿವುಡ್ನ ನಿಜವಾದ ಬ್ಯಾಡ್ ಬಾಯ್ ಆಗಿದ್ದರು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತರಾಗಿ ಜೈಲು ಸಹ ಅನುಭವಿಸಿದರು. ಆದರೆ ಸಂಜಯ್ ದತ್ ಮನಸ್ಸು ಮಾಡಿದ್ದರೆ ಬರೋಬ್ಬರಿ 267 ಮಂದಿಯ ಪ್ರಾಣ ಉಳಿಸಬಹುದಾಗಿತ್ತಂತೆ. ಈ ಬಗ್ಗೆ ವಿಶೇಷ ಸಾರ್ವಜನಿಕ ಅಭಿಯೋಜಕ, ರಾಜ್ಯಸಭಾ ನಾಮನಿರ್ದೇಶಿತರೂ ಆಗಿರುವ ಉಜ್ವಲ್ ನಿಕಮ್ ಮಾತನಾಡಿದ್ದಾರೆ.
1993 ರಲ್ಲಿ ಮುಂಬೈನಲ್ಲಿ ನಡೆದ ಬಾಂಬ್ ದಾಳಿ ಪ್ರಕರಣ ಕುರಿತಾಗಿ ಸರ್ಕಾರ ಪರ ವಾದ ಮಂಡಿಸಿದ್ದ ಉಜ್ವಲ್ ನಿಕಮ್, ಸಂದರ್ಶನವೊಂದರಲ್ಲಿ ಮಾತನಾಡಿ ಸಂಜಯ್ ದತ್ ಪ್ರಕರಣದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ‘ಸಂಜಯ್ ದತ್ ಮನಸ್ಸು ಮಾಡಿದ್ದರೆ 257 ಮಂದಿಯ ಜೀವ ಉಳಿಸಬಹುದಾಗಿತ್ತು. ಸಂಜಯ್ ದತ್ ಯಾವ ವಾಹನದಿಂದ ಎಕೆ 47 ಗನ್ ತೆಗೆದುಕೊಂಡಿದ್ದರೊ ಅದೇ ವಾಹನದಲ್ಲಿ ಮುಂಬೈ ಬ್ಲಾಸ್ಟ್ಗೆ ಬಳಕೆ ಆದ ಬಾಂಬುಗಳಿದ್ದವು’ ಎಂದಿದ್ದಾರೆ.
ಅಬು ಸಲೇಂನ ಬಲಗೈ ಭಂಟ ದಾವೂದ್ ಇಬ್ರಾಹಿಂ ವ್ಯಾನ್ ಒಂದನ್ನು ಸಂಜಯ್ ದತ್ ಮನೆಗೆ ತಂದಿದ್ದ. ಆ ವ್ಯಾನ್ನಲ್ಲಿ ಹಲವಾರು ಬಾಂಬ್ಗಳು, ಎಕೆ 47 ಬಂದೂಕುಗಳು, ಹ್ಯಾಂಡ್ ಗ್ರನೇಡ್ಗಳು ಇದ್ದವು. ಸಂಜಯ್ ದತ್ ಕೆಲವು ಬಂದೂಕು, ಹ್ಯಾಂಡ್ ಗ್ರೆನೇಡ್ಗಳನ್ನು ಸಹ ತೆಗೆದುಕೊಂಡಿದ್ದರು. ಆದರೆ ಕೆಲವು ದಿನಗಳ ಬಳಿಕ ಎಲ್ಲವನ್ನೂ ಮರಳಿಸಿಬಿಟ್ಟಿದ್ದ ಆದರೆ ಒಂದು ಎಕೆ-47 ಬಂದೂಕನ್ನು ಮಾತ್ರ ಇಟ್ಟುಕೊಂಡಿದ್ದ. ಒಂದು ವೇಳೆ ಆ ವ್ಯಾನ್ನ ಬಗ್ಗೆ ಪೊಲೀಸರಿಗೆ ಸಂಜಯ್ ದತ್ ಮಾಹಿತಿ ನೀಡಿಬಿಟ್ಟಿದ್ದಿದ್ದರೆ ಮುಂಬೈ ಬ್ಲಾಸ್ಟ್ ಖಂಡಿತ ನಡೆಯುತ್ತಿರಲಿಲ್ಲ, 257 ಮಂದಿ ಸಾವನ್ನಪ್ಪುತ್ತಿರಲಿಲ್ಲ’ ಎಂದಿದ್ದಾರೆ.
ಸಂಜಯ್ ದತ್ ಅವರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿಯೂ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಉಜ್ವಲ್ ನಿಕಮ್, ‘ಸಂಜಯ್ ದತ್ ಕಾನೂನಿನ ಕಣ್ಣಲ್ಲಿ ಅಪರಾಧ ಎಸಗಿದ್ದಾರೆ. ಆದರೆ ಆತ ನೇರವಾದ ವ್ಯಕ್ತಿತ್ವ ಉಳ್ಳವರು. ನನ್ನ ದೃಷ್ಟಿಯಲ್ಲಿ ಆತ ನಿರಪರಾಧಿ’ ಎಂದಿದ್ದಾರೆ ಉಜ್ವಲ್.
ಸಂಜಯ್ ದತ್ ಅವರನ್ನು ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಟಾಡಾ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆ ಬಳಿಕ ಅವರಿಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಲಾಯ್ತು. ಐದು ವರ್ಷ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು ಸಂಜಯ್ ದತ್.