ಸನಾತನ ಸಂಸ್ಥೆ ಮಾನಹಾನಿ ಪ್ರಕರಣ ಮಹಾರಾಷ್ಟ್ರಕ್ಕೆ ವರ್ಗಾವಣೆ

ಮುಂಬೈ: ಗೋವಾ ಮೂಲದ ಸನಾತನ ಸಂಸ್ಥೆಯಿಂದ ತಮಗೆ ಜೀವಬೆದರಿಕೆಯಿದೆಯೆಂದು ಹತ್ಯೆಯಾದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಪುತ್ರ ಹಾಗೂ ಕೆಲವು ಪತ್ರಕರ್ತರು ವ್ಯಕ್ತಪಡಿಸಿರುವ ಭೀತಿಯು ‘ತಾರ್ಕಿಕ ಹಾಗೂ ನೈಜವೆಂಬಂತೆ ತೋರುತ್ತದೆ’ ಎಂದು ಬಾಂಬೆ ಹೈಕೋರ್ಟ್ ಗುರುವಾರ ತಿಳಿಸಿದೆ ಹಾಗೂ ಸನಾತನ ಸಂಸ್ಥೆಯು ಅವರ ವಿರುದ್ಧ ಹೊರಿಸಿರುವ ಮಾನಹಾನಿ ಪ್ರಕರಣದ ಮೊಕದ್ದಮೆಗಳ ವಿಚಾರಣೆಯನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಅನುಮತಿ ನೀಡಿದೆ.

ತನ್ನ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡುವ ಅಥವಾ ಪ್ರಕಟಿಸುವ ಮೂಲಕ ತನ್ನ ವರ್ಚಸ್ಸಿಗೆ ಹಾನಿ ಮಾಡಿದ್ದಾರೆಂದು ಆರೋಪಿಸಿ ಸನಾತನ ಸಂಸ್ಥೆಯು 2017 ಹಾಗೂ 2018ರಲ್ಲಿ ನರೇಂದ್ರ ದಾಭೋಲ್ಕರ್ ಅವರ ಪುತ್ರ ಹಾಮೀದ್ ಹಾಗೂ ಇತರ ಕೆಲವು ಪತ್ರಕರ್ತರ ವಿರುದ್ಧ ಗೋವಾದ ಪೊಂಡಾದಲ್ಲಿರುವ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು.
ನ್ಯಾಯಮೂರ್ತಿ ಎನ್.ಜೆ.ಜಾಮದಾರ್ ನೇತೃತ್ವದ ಏಕ ಸದಸ್ಯ ಪೀಠವು ಈ ಮಾನನಷ್ಟ ಮೊಕದ್ದಮೆಗಳನ್ನು ಪೊಂಡಾದ ನ್ಯಾಯಾಲಯದಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಅನುಮತಿ ನೀಡಿದೆ. ಸನಾತನಸಂಸ್ಥೆಯು ಪೊಂಡಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.
ಗೋವಾ ರಾಜ್ಯದಲ್ಲಿ ಸನಾತನ ಸಂಸ್ಥೆಯು ಪ್ರಬಲವಾಗಿದ್ದು, ಅಲ್ಲಿ ತಮ್ಮ ಜೀವನಕ್ಕೆ ಅಪಾಯವಿದೆ. ಆದುದರಿಂದ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಮಹಾರಾಷ್ಟ್ರದ ಇತರ ಯಾವುದೇ ನ್ಯಾಯಾಲಯಕ್ಕೆ ವರ್ಗಾಯಿಸಲು ಅನುಮತಿ ಕೋರಿ ಹಾಮೀದ್ ದಾಭೋಲ್ಕರ್ ಹಾಗೂ ಪತ್ರಕರ್ತರು ಹೈಕೋರ್ಟ್ ಮೆಟ್ಟಲೇರಿದ್ದರು.
ಒಂದು ವೇಳೆ ಪೊಂಡಾದಲ್ಲಿ ತಮ್ಮ ವಿಚಾರಣೆ ನಡೆದಲ್ಲಿ, ಪ್ರತ್ಯೇಕ ಘಟನೆಗಳಲ್ಲಿ ಕೊಲೆಗೀಡಾದ ದಾಭೋಲ್ಕರ್ ಹಾಗೂ ಇತರ ಸಾಮಾಜಿಕ ಕಾರ್ಯಕರ್ತರಾದ ಗೋವಿಂದ ಪನ್ಸಾರೆ, ಪ್ರೊ. ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರಿಗಾದ ಗತಿ ತಮಗೂ ಬಂದಿತೇಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.
ನ್ಯಾಯಮೂರ್ತಿ ಜಾಮದಾರ್ ಅವರು ಸೆಪ್ಟೆಂಬರ್ 3ರಂದು ನೀಡಿದ ಆದೇಶದಲ್ಲಿ ಅರ್ಜಿದಾರರ ವಾದವನ್ನು ಪುರಸ್ಕರಿಸಿದ್ದಾರೆ. ಸನಾತನ ಸಂಸ್ಥೆ ಹಾಗೂ ಅರ್ಜಿದಾರರ ನಡುವೆಯಿರುವ ವೈಷಮ್ಯವನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ ಅವರ ಅಹವಾಲುಗಳು ನೈಜ ಹಾಗೂ ತಾರ್ಕಿಕ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
