‘ಸಾಸು ಟು ಬಿ’ ವಿಡಿಯೋ ವೈರಲ್: ಅತ್ತೆಯಾಗುವವರಿಗೆ ಹೊಸ ಶಾಸ್ತ್ರ!

ಮನೆ ತುಂಬಾ ಹೆಣ್ಣು ಮಕ್ಕಳಿದ್ದರೆ ಅದರ ಸಂಭ್ರಮವೇ ಬೇರೆ ಹಬ್ಬ ಹರಿದಿನಗಳು ಮದುವೆ ಮುಂಜಿ ಯಾವುದೇ ಶುಭ ಕಾರ್ಯಗಳು ಬರಲಿ ಅಲ್ಲಿ ಹೆಣ್ಣುಮಕ್ಕಳ ಹಾಜರಿ ಸ್ವಲ್ಪ ಹೆಚ್ಚಿದರೆನೆ ಆ ಹಬ್ಬಕೊಂದು ಕಳೆ. ಹಾಗೆಯೇ ಬಹುತೇಕ ಹೆಣ್ಣು ಮಕ್ಕಳು ತುಂಬಾ ಸೂಕ್ಷಜೀವಿಗಳು, ಗಂಡನ ಸಣ್ಣ ತಪ್ಪಿನಿಂದ ಹಿಡಿದು ದೊಡ್ಡ ಸಾಧನೆಯವರೆಗೆ ಎಲ್ಲವನ್ನು ಅವರು ಗುರುತಿಸಿ ಪತ್ತೆದಾರಿಕೆ ಮಾಡುತ್ತಾರೆ.

ಅದರ ಜೊತೆಗೆ ಬದುಕಿನ ಸಣ್ಣ ಸಣ್ಣ ಖುಷಿಗಳನ್ನು ಅವರು ಬಹಳ ದೊಡ್ಡದಾಗಿ ಸಂಭ್ರಮಿಸುತ್ತಾರೆ. ಇದರ ಜೊತೆಗೆ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಕಾರ್ಯಕ್ರಮಗಳು ಹೆಚ್ಚು ಹೆಣ್ಣು ಮಗು ಕಿಶೋರಾವಸ್ಥೆಯಿಂದ ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಆಕೆಗೆ ಸಣ್ಣ ಮದುವೆ (puberty ceremony) ಅಥವಾ ರಿತು ಕಲಾ ಸಂಸ್ಕಾರ ಎಂಬ ಕಾರ್ಯಕ್ರಮವನ್ನು ಮಾಡುತ್ತಾರೆ.
ಇದಾದ ಹಲವು ವರ್ಷಗಳ ನಂತರ ಮನೆ ಮಗಳಿಗೆ ಮದುವೆ ಮಾಡುವಾಗಲಂತೂ ನಿಶ್ಚಿತಾರ್ಥ, ಮದುವೆ ಮೆಹಂದಿ ಹಳದಿ ಅಂತ ಹೆಳ್ಕೊಂಡು ಹಲವು ದಿನಗಳ ಕಾಲ ಸಂಭ್ರಮಾಚರಣೆ ನಡೆಯುತ್ತಲೇ ಇರುತ್ತದೆ. ಬಂಧು ಬಳಗವೆಲ್ಲಾ ಈ ಸಂಭ್ರಮದಲ್ಲಿ ಜೊತೆಯಾಗ್ತಾರೆ. ನಂತರ ಬರುವುದು ನೋಡಿ ಸೀಮಂತ..! ಹೌದು ಮದುವೆ ನಂತರ ಮಕ್ಕಳು ಸಹಜ ಅದರಂತೆ ಮಗುವಾಗುವುದಕ್ಕೂ ಮೊದಲು ಗರ್ಭಿಣಿಗೆ ಸೀಮಂತ ಮಾಡ್ತಾರೆ. ಸೀಮಂತಕ್ಕೂ ಇಡೀ ಬಂಧು ಬಳಗ ಅಂತ ನೂರಾರು ಜನ ಸೇರ್ತಾರೆ. ನಂತರ ನವಮಾಸ ಕಳೆದು ಮಗು ಜನಿಸುತ್ತೆ. ಮಗುವಿನ ನಾಮಕರಣ ನಡೆಯುತ್ತೆ ಹೀಗೆ ಕಷ್ಟಸುಖ ನೋವು ನಲಿವುಗಳ ನಡುವೆಯೂ ಹೆಣ್ಣಿನ ಬದುಕಿನಲ್ಲಿ ಸಂಭ್ರಮಾಚರಣೆ ನಡೆಯುತ್ತಲೇ ಇರುತ್ತದೆ.
ಹೆಣ್ಣಿಗೆ ಮದುವೆ, ಸೀಮಂತ, ನಾಮಕರಣ ಮುಂತಾದ ಕಾರ್ಯಕ್ರಮಗಳನ್ನು ನೀವು ಸಾಮಾನ್ಯವಾಗಿ ಎಲ್ಲಾ ಕಡೆ ನೋಡಿರುತ್ತೀರಿ, ಬಹುತೇಕ ವಿವಾಹವಾದ ಪ್ರತಿ ಹೆಣ್ಣಿಗೂ ಇದನ್ನು ಮಾಡುತ್ತಾರೆ. ಆದರೆ ಇಲ್ಲೊಂದು ಕುಟುಂಬ ತಮ್ಮ ಮನೆಯ ಹೆಣ್ಣಿಗಾಗಿ ಹೊಸದೊಂದು ಶಾಸ್ತ್ರವನ್ನು ಮಾಡಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಾಗಿದ್ರೆ ಈ ಹೆಂಗೆಳೆಯರ ಬಳಗ ಮಾಡಿದ ಹೊಸ ಶಾಸ್ತ್ರವೇನು?
ಅದೇ ನೋಡಿ ‘ಸಾಸ್ ಟು ಬಿ’ ಹೊಸದಾಗಿ ಅತ್ತೆಯಾಗಲಿರುವವಳಿಗಾಗಿ ಮಾಡಿದ ಶಾಸ್ತ್ರವಿದು. ಕೇಳುವುದಕ್ಕೆ ಒಂತರ ವಿಚಿತ್ರ ಅನಿಸಿದರು ಈ ವೀಡಿಯೋ ನೋಡುವುದಕ್ಕೆ ತುಂಬಾ ಮಜಾವಾಗಿದೆ.
ಬಹುಶಃ ಆ ಮಹಿಳೆಯ ಮಗನಿಗೆ ಮದುವೆ ಸದ್ಯದಲ್ಲೇ ಇದ್ದು, ಮನೆಗೆ ಹೊಸ ಸೊಸೆ ಆಗಮಿಸುವ ಸಮಯವಿದು. ಸೋ ಹೀಗಾಗಿ ಹೊಸದಾಗಿ ಅತ್ತೆಯಾಗುತ್ತಿರುವ ಮಹಿಳೆಗೆ ಮನೆಯ ಹೆಂಗೆಳೆಯರೆಲ್ಲಾ ಸೇರಿ ಮಾಡಿದ ಶಾಸ್ತ್ರವಿದು ಆದರೆ ಸಂಪ್ರದಾಯವಲ್ಲ, ಸುಮ್ಮನೆ ಒಂಥರಾ ತಮಾಷೆಗಾಗಿ ಮನೆಯ ಹೆಣ್ಣು ಮಕ್ಕಳೆಲ್ಲಾ ಸೇರಿ ಅತ್ತೆಯಾಗುವವಳಿಗೆ ಒಂದು ‘ಸಾಸ್ ಟು ಬಿ’ ಎಂಬ ಆಚರಣೆಯನ್ನು ಮಾಡಿದ್ದಾರೆ, ಅದರಲ್ಲಿ ಅವರ ಮನೆಯ ಹೆಣ್ಣುಮಕ್ಕಳೇ, ಮುಂದೆ ಸೊಸೆ ಬಂದಾಗ ಅತ್ತೆಯಾಗುವವಳು ಹೇಗೆ ಇರಬೇಕು ಎಂಬುದನ್ನು ಸೂಕ್ಷ್ಮವಾಗಿ ಹೊಸದಾಗಿ ಅತ್ತೆಯಾಗುವಳಿಗೆ ಹೇಳುತ್ತಿರುವಂತಿದೆ.
ವೀಡಿಯೋದಲ್ಲೇನಿದೆ ನೋಡೋಣ ಬನ್ನಿ
ವೀಡಿಯೋದಲ್ಲಿ ಕಾಣುವಂತೆ ಹೊಸದಾಗಿ ಅತ್ತೆಯಾಗಲಿರುವ ಮಹಿಳೆ ಹಸಿರು ಬಣ್ಣದ ಚೂಡಿಧಾರ್ ಧರಿಸಿದ್ದು, ಅವರನ್ನು ಕುರ್ಚಿಯೊಂದರ ಮೇಲೆ ಕೂರಿಸಲಾಗಿದೆ. ನಂತರ ಒಬ್ಬೊಬ್ಬರೇ ಹೆಣ್ಣು ಮಕ್ಕಳು ಅವರ ಬಳಿ ಬಂದು ಅವರಿಗೆ ಒಂದೊಂದು ಉಡುಗೊರೆ ಕೊಟ್ಟು ಹೋಗುತ್ತಾರೆ. ಎಲ್ಲರೂ ಹಸಿರು ಬಟ್ಟೆಯನ್ನೇ ಧರಿಸಿದ್ದು, ಮೊದಲಿಗೆ ಬಂದವರು ‘ಸಾಸ್ ಟು ಬಿ’ ಎಂಬ ಬ್ಯಾಂಡನ್ನು ಅವರ ಕತ್ತಿಗೆ ಹಾಕುತ್ತಾರೆ. ನಂತರ ಬಂದ ಇಬ್ಬರು ಅವರ ತಲೆಗೆ ಹಳದಿ ಹೂಗಳ ಪುಟ್ಟ ಕಿರೀಟವನ್ನು ಇಡುತ್ತಾರೆ. ನಂತರ ಬಂದ ಯುವತಿ ಅವರ ಕಣ್ಣಿಗೆ ಕನ್ನಡಕ ಹಾಕುತ್ತಾರೆ. ನಂತರ ಒಬ್ಬರು ಮಹಿಳೆ ಊರುಗೋಲನ್ನು ಹಿಡಿದುಕೊಂಡು ಬಂದು ಅವರ ಬಲಗೈಗೆ ಅದನ್ನು ಕೊಡ್ತಾರೆ. ನಂತರ ಬಂದವರು ಭಗವದ್ಗೀತೆಯೋ ಅಥವಾ ಬೇರೇನೋ ಗೊತ್ತಿಲ್ಲ ಧಾರ್ಮಿಕ ಗ್ರಂಥದಂತಿರುವ ಪುಸ್ತಕವೊಂದನ್ನು ಅವರ ಕೈಗಿಡುತ್ತಾರೆ. ನಂತರ ಬಂದವರು ಕೈಯಲ್ಲಿ ಭಜನೆ ಮಾಡುವಾಗ ತಟ್ಟುವ ತಾಳವೊಂದನ್ನು ಹಿಡಿದುಕೊಂಡು ಬಂದು ಅವರ ಕೈಗಿಡುತ್ತಾರೆ. ನಂತರ ಕೊನೆಗೆ ಬಂದ ಹುಡುಗಿ ಅವರ ಬಾಯಿಗೆ ಗಮ್ ಟೇಪ್ ಅಂಟಿಸಿ ಬಿಡುತ್ತಾಳೆ. ನಂತರ ಎಲ್ಲರೂ ಜೊತೆಯಾಗಿ ಸೇರಿ ಹಾಡಿಗೆ ಸಂಭ್ರಮಿಸಿ ಫೋಟೋ ವೀಡಿಯೋ ತೆಗೆಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಈ ಹೆಂಗೆಳೆಯರ ಜೋಡಿ ಮನೆಗೆ ಹೊಸ ಸೊಸೆ ಬರುತ್ತಿರುವ ವೇಳೆ ಹೊಸದಾಗಿ ಅತ್ತೆಯಾಗುತ್ತಿರುವ ಮಹಿಳೆ ತನ್ನೆಲ್ಲಾ ದೌಲತ್ತು ಅಧಿಕಾರವನ್ನು ನಿಧಾನವಾಗಿ ಸೊಸೆಗೆ ಒಪ್ಪಿಸಿ ಬಿಟ್ಟು ಕೆಲವೊಂದು ವಿಚಾರಗಳನ್ನು ನೋಡಿಯೂ ನೋಡದಂತೆ ಕೇಳಿಯೂ ಕೇಳದಂತೆ ಇರಬೇಕು. ಇಹದ ಮೋಹವನ್ನು ತೊರೆದು ನಿಧಾನವಾಗಿ ಆಧ್ಯಾತ್ಮದತ್ತ ಮನಸ್ಸು ಮಾಡಬೇಕು ಎಂಬುದನ್ನು ಈ ಹೆಂಗೆಳೆಯರು ಸೂಕ್ಷ್ಮವಾಗಿ ಹಾಗೂ ತಮಾಷೆಯಾಗಿ ಹೇಳಿದ್ದು, ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
pratikkiaaradhana and prerna_mukasdar ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಸಾಸುವಿನಿಂದ ಆರಂಭವಾಗಿ ಶ್‌ಶ್ ಎನ್ನುವಲ್ಲಿಗೆ ಮುಕ್ತಾಯವಾಯ್ತು. ತಲೆಗೆ ಕಿರೀಟವಿಡುವುದರಿಂದ ಹಿಡಿದು ಬಾಯಿಗೆ ಗಮ್‌ಟೇಪ್ ಹಾಕಿ ಕೋಪಗೊಳಿಸುವವರೆಗೆ ನಮ್ಮದೇ ಆದ ಸಸುಮಾ(ಅತ್ತೆ) ಆಗುತ್ತಿರುವವರನ್ನು ಪ್ರಸ್ತುತಪಡಿಸುತ್ತಿದ್ದೇವೆ ಈಗ ಸಂಪೂರ್ಣವಾಗಿ ವಾಕಿಂಗ್ ಸ್ಟಿಕ್, ಭಜನ್ ವೈಬ್‌ಗಳು ಮತ್ತು ಅಪೇಕ್ಷಿಸದ ಸಲಹೆಗಳಿಂದ ಮುಕ್ತವಾದ ಮೌನದೊಂದಿಗೆ ಸಜ್ಜುಗೊಂಡಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
