Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಸ್.ಎಸ್. ರಾಜಮೌಳಿ ಮತ್ತು ಮಹೇಶ್ ಬಾಬು ಸಿನಿಮಾಗೆ ವಿಶ್ವ ಮಟ್ಟದ ಬಿಡುಗಡೆ: ಹಾಲಿವುಡ್ ಕಂಪನಿಯೊಂದಿಗೆ ಮಾತುಕತೆ

Spread the love

ಎಸ್‌ಎಸ್‌ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. RRR ಬಳಿಕ ರಾಜಮೌಳಿ ಬತ್ತಳಿಕೆಯಿಂದ ಇನ್ನೆಂಥಾ ಸಿನಿಮಾ ಬರುತ್ತೆ ಅನ್ನೋದನ್ನು ಸಿನಿಮಾ ಮಂದಿನೂ ಕುತೂಹಲದಿಂದ ನೋಡುತ್ತಿದ್ದಾರೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಬಗ್ಗೆ ಸಣ್ಣದೊಂದು ಸುಳಿವನ್ನೂ ರಾಜಮೌಳಿ ಬಿಟ್ಟುಕೊಟ್ಟಿಲ್ಲ.

ಹೀಗಾಗಿ ದಿನದಿಂದ ದಿನಕ್ಕೆ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ.

ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ಎಸ್.ಎಸ್. ರಾಜಮೌಳಿ ಕಾಂಬಿನೇಷನ್‌ ಸಿನಿಮಾವನ್ನು ಕೆ.ಎಲ್. ನಾರಾಯಣ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಮೂರು ಶೆಡ್ಯೂಲ್‌ಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗಿದೆ.

ಈ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗೆ ‘SSMB29’ ಎಂದು ತಾತ್ಕಾಲಿಕವಾಗಿ ಟೈಟಲ್ ಇಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಮಸಲ್ ಮ್ಯಾನ್ ಜಾನ್ ಅಬ್ರಹಾಂ, ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವು ತಾರೆಯರು ನಟಿಸುತ್ತಿದ್ದಾರೆ. ಹೀಗಾಗಿ ನಿರೀಕ್ಷೆಗಳು ಗರಿಗೆದರಿವೆ.

ಈ ಹಿಂದೆ ರಾಜಮೌಳಿ ನಿರ್ದೇಶಿಸಿದ ಸಿನಿಮಾಗಳಂತೆ ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿಜಯೇಂದ್ರ ಪ್ರಸಾದ್ ಹಾಗೂ ನಿರ್ದೇಶಕ ದೇವಾ ಕಟ್ಟಾ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ರಾಜಮೌಳಿ ಈಗಾಗಲೇ ಭಾರತದ ಹಲವು ಭಾಗಗಳಲ್ಲಿ ಈ ಸಿನಿಮಾ ಚಿತ್ರೀಕರಣವನ್ನು ಮುಗಿಸಿದೆ. ಈಗ ಇಡೀ ಚಿತ್ರತಂಡ ವಿದೇಶಕ್ಕೆ ಕಾಲಿಟ್ಟಿದೆ. ಸದ್ಯ ರಾಜಮೌಳಿ, ಮಹೇಶ್ ಬಾಬು ಹಾಗೂ ಇಡೀ ತಂಡ ಕೀನ್ಯಾ ರಾಜಧಾನಿ ನೈರೋಬಿಯಲ್ಲಿ ಸಿನಿಮಾದ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಿದೆ.

ಈ ಸಂಬಂಧ ಎಸ್‌.ಎಸ್‌. ರಾಜಮೌಳಿ ಕೀನ್ಯಾ ದೇಶದ ಪ್ರವಾಸೋದ್ಯಮ ಸಚಿವರು ಮತ್ತು ಇತರೆ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಅಲ್ಲದೆ ಅವರೊಂದಿಗೆ ಚರ್ಚೆ ಮಾಡಿ ಸಹಿ ಹಾಕುತ್ತಿರುವ ಫೋಟೋಗಳು ಕೂಡ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿತ್ರೀಕರಣ ನಡೆಯುತ್ತಿರುವಾಗಲೇ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಸದ್ಯಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ಎನಿಸಿಕೊಂಡಿದ್ದರೂ, ರಾಜಮೌಳಿ ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಡುಗಡೆಗೂ ಮೊದಲೇ ಸಂಚಲನ ಮೂಡಿಸುತ್ತಿದೆ.

ಈ ಸಿನಿಮಾವನ್ನು ಗ್ಲೋಬಲ್ ರಿಲೀಸ್ ಮಾಡುವುದಕ್ಕೆ ಹಾಲಿವುಡ್‌ನ ಪ್ರಮುಖ ವಿತರಣಾ ಸಂಸ್ಥೆ ವಾರ್ನರ್ ಬ್ರದರ್ಸ್‌ ಜೊತೆ ಚರ್ಚೆ ನಡೆಸಲಾಗುತ್ತಿದೆ. ಈ ಬಗ್ಗೆ ತೆಲುಗಿನ ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಪ್ರಪಂಚದ ಅತಿ ಹೆಚ್ಚು ದೇಶಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ದೇಶಕ ರಾಜಮೌಳಿ ಯೋಜನೆ ರೂಪಿಸುತ್ತಿದ್ದಾರೆಂದು ಸುದ್ದಿಯಾಗಿದೆ.

ಹಾಲಿವುಡ್‌ನಲ್ಲಿ ಮೆಗಾ ಬ್ಲಾಕ್‌ಬಸ್ಟರ್‌ ಸಿನಿಮಾ ‘ಅವತಾರ್ 2’ ಹಾಗೂ ‘ಅವೆಂಜರ್ಸ್ ಎಂಡ್‌ಗೇಮ್’ ಸಿನಿಮಾಗಳು ಅತಿ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಿವೆ. ಅಲ್ಲದೆ ವಿಶ್ವದ ಅತೀ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಈ ಎರಡು ಸಿನಿಮಾಗಳು ಮುಂಚೂಣಿಯಲ್ಲಿವೆ. ಆಂಥೋನಿ ರೂಸೋ ಮತ್ತು ಜೋಯ್ ರೂಸೋ ನಿರ್ದೇಶನದ ‘ಅವೆಂಜರ್ಸ್’ 85ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಿತ್ತು. ಅದೇ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್ 2’ 70ಕ್ಕೂ ಹೆಚ್ಚು ದೇಶಗಳಲ್ಲಿ ತೆರೆ ಕಂಡು ದಾಖಲೆ ಮಾಡಿತ್ತು.

ಆದರೆ, ಈ ಎರಡೂ ಸಿನಿಮಾಗಳಿಗಿಂತ ಹೆಚ್ಚು ದೇಶಗಳಲ್ಲಿ ‘SSMB29’ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ರಾಜಮೌಳಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದೆಂದು ಹೇಳಲಾಗುತ್ತಿದೆ. ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ಎಸ್.ಎಸ್. ರಾಜಮೌಳಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಇನ್ನೂ ಹೆಸರಿಡದ ಸಿನಿಮಾ ಕೇವಲ ಭಾರತೀಯ ಚಿತ್ರರಂಗದಲ್ಲಷ್ಟೇ ಅಲ್ಲ. ವಿಶ್ವ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಮುಂದಾಗಿದೆ. ಯಾರೂ ಮಾಡಿರದ ಹೊಸ ದಾಖಲೆ ಸೃಷ್ಟಿಸಲು ಸ್ಕೆಚ್ ಹಾಕಿದೆ ಎನ್ನಲಾಗಿದೆ.

ನಿರ್ಮಾಪಕ ನಾರಾಯಣ್ ಈ ಸಿನಿಮಾವನ್ನು ಸುಮಾರು 120ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಈ ಸಿನಿಮಾ ಐದಾರು ಭಾಷೆಗಳಲ್ಲಿ ಅಲ್ಲ. ಸುಮಾರು 20 ಭಾಷೆಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಕಾರ್ಯತಂತ್ರ ರೂಪಿಸಿದ್ದಾರೆ. ಇದು ಕಾರ್ಯರೂಪಕ್ಕೆ ಬಂದರೆ, ಈ ಸಿನಿಮಾ ಸಂಪೂರ್ಣವಾಗಿ ಗ್ಲೋಬಲ್ ಸಿನಿಮಾವಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಮಹೇಶ್ ಬಾಬು ಭಾರತೀಯ ಚಿತ್ರರಂಗಕ್ಕಷ್ಟೇ ಅಲ್ಲ. ಇಡೀ ವಿಶ್ವಕ್ಕೆ ಗ್ಲೋಬಲ್ ಸ್ಟಾರ್‌ ಆಗಿ ಹೊರಹೊಮ್ಮುವುದು ಖಚಿತ ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿಯುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *