ರಷ್ಯನ್ ಮಹಿಳೆ ಗುಹೆ ವಾಸ: ಕುಟುಂಬದ ಮಧ್ಯೆ ಕಸ್ಟಡಿ ಮತ್ತು ಭೇಟಿಗೆ ಪತಿಯ ಕೋರಿಕೆ

ಗೋಕರ್ಣದಲ್ಲಿ ನಿರ್ಜನ ಪ್ರದೇಶದ ಗುಹೆಯೊಂದರಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯನ್ ಮೂಲದ ವಿದೇಶಿ ಮಹಿಳೆಯ ಪತಿ ಈಗ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅವರು ಹೇಳಿಕೆ ನೀಡಿದ್ದಾರೆ. ಆಕೆಯನ್ನು 8 ವರ್ಷದ ಹಿಂದೆ ಗೋವಾದಲ್ಲಿ ಭೇಟಿಯಾಗಿದ್ದೆ ಹಾಗೂ ಇಬ್ಬರ ಮಧ್ಯೆ ಪ್ರೀತಿಯಾಗಿ ಮದ್ವೆಯಾಗಿದ್ದೆವು.

ಆದರೆ ನಂತರದಲ್ಲಿ ಆಕೆ ಗೋವಾದಿಂದ ನನಗೆ ಹೇಳದೇ ಬಂದಿದ್ದಳು ಎಂದು ಆಕೆಯ ಪತಿ ಹೇಳಿಕೆ ನೀಡಿದ್ದಾರೆ.
ನೀನಾ ಕುಟಿನ್ ಎಂಬ ಮಹಿಳೆ ಗೋಕರ್ಣದಲ್ಲಿ ನಿರ್ಜನ ಪ್ರದೇಶವೊಂದರ ಗುಹೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸ ಮಾಡುತ್ತಿರುವುದು ಅಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಗೊತ್ತಾದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು.. ಇದಾದ ನಂತರ ಆಕೆಯನ್ನು ಹಾಗೂ ಮಕ್ಕಳನ್ನು ಗುಹೆಯಿಂದ ರಕ್ಷಣೆ ಮಾಡಲಾಗಿತ್ತು. ಈಗ ಆಕೆಯ ಪತಿ ಇಸ್ರೇಲ್ ಮೂಲದ ಡ್ರೋರ್ ಗೋಲ್ಡ್‌ಸ್ಟೈನ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ನಾವು ಭಾರತದಲ್ಲಿ ಜೊತೆಯಾಗಿ 7 ತಿಂಗಳನ್ನು ಕಳೆದಿದ್ದೇವೆ. ಹಾಗೂ ಉಳಿದ ಸಮಯವನ್ನು ಹೆಚ್ಚಾಗಿ ನಾವು ಉಕ್ರೇನ್‌ನಲ್ಲಿ ಕಳೆದೆವು. ಕಳೆದ ನಾಲ್ಕು ವರ್ಷಗಳಿಂದ ನನ್ನ ಮಕ್ಕಳಾದ 6 ವರ್ಷದ ಪ್ರೇಮಾ ಹಾಗೂ 5 ವರ್ಷದಾ ಅಮಾಳನ್ನು ನೋಡುವುದಕ್ಕಾಗಿ ಆಗಾಗ ಭಾರತಕ್ಕೆ ಭೇಟಿ ನೀಡುತ್ತಿರುತ್ತಿದ್ದೆ ಎಂದು ಗೋಲ್ಡ್ ಸ್ಟೈನ್ ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ಆಕೆ ನನಗೂ ಮಾಹಿತಿ ನೀಡದೇ ಗೋವಾದಿಂದ ಹೊರಟು ಹೋಗಿದ್ದಳು. ಆಕೆ ಎಲ್ಲಿದ್ದಾಳೆ ಎಂಬುದು ನನಗೂ ಗೊತ್ತಿರಲಿಲ್ಲ. ಇದಾದ ನಂತರ ನಾಪತ್ತೆ ಪ್ರಕರಣ ದಾಖಲಿಸಿದೆ ನಂತರ ನೀನಾ ಹಾಗೂ ಮಕ್ಕಳು ಗೋಕರ್ಣದಲ್ಲಿ ವಾಸ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ನಾನು ನನ್ನ ಮಕ್ಕಳು ಹೇಗಿದ್ದಾರೆ ಎಂದು ನೋಡಬೇಕು, ಆಕೆ ನನಗೆ ಅವರ ಜೊತೆ ಸಮಯ ಕಳೆಯಲು ಬಿಡುತ್ತಿಲ್ಲ, ಸ್ವಲ್ಪ ಹೊತ್ತು ಅಷ್ಟೇ ಆಕೆ ಮಕ್ಕಳ ಜೊತೆ ಇರಲು ಬಿಡುತ್ತಾಳೆ, ಮಕ್ಕಳನ್ನು ನೋಡುವುದನ್ನೇ ಆಕೆ ನನಗೆ ಕಷ್ಟವಾಗಿಸಿದ್ದಾಳೆ ಎಂದು ಆಕೆಯ ಪತಿ ಹೇಳಿದ್ದಾರೆ. ನಾನು ನನ್ನ ಮಕ್ಕಳನ್ನು ನೋಡಬೇಕು ಹಾಗೂ ಅವರನ್ನು ನನ್ನ ಕಸ್ಟಡಿಗೆ ಪಡೆಯಲು ಬಯಸಿದ್ದೇನೆ. ನನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಹತ್ತಿರವಾಗಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರತಿ ತಿಂಗಳು ನೀನಾಗೆ ಒಳ್ಳೆ ಮೊತ್ತದ ಹಣವನ್ನು ಕಳಿಸುತ್ತೇನೆ. ಅವರಿಗೆ ಬೇಕಾದ ಎಲ್ಲವೂ ಅವಳಲ್ಲಿದೆ ಎಂದು ಅವರು ಹೇಳಿದ್ದಾರೆ. ಅವರ ಗಡೀಪಾರು ಕುರಿತು ಮಾತನಾಡಿದ ಗೋಲ್ಡ್‌ಸ್ಟೈನ್, ಸರ್ಕಾರವು ತನ್ನ ಹೆಣ್ಣುಮಕ್ಕಳನ್ನು ರಷ್ಯಾಕ್ಕೆ ಕಳುಹಿಸುವುದನ್ನು ತಡೆಯಲು ಎಲ್ಲವನ್ನೂ ಮಾಡುವುದಾಗಿ ಹೇಳಿದ್ದಾರೆ. ಏಕೆಂದರೆ ಅವರನ್ನು ಅಲ್ಲಿಗೆ ಕರೆದೊಯ್ದರೆ ನನಗೆ ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಜುಲೈ 11 ರಂದು ಪೊಲೀಸ್ ಗಸ್ತು ತಿರುಗುತ್ತಿದ್ದಾಗ ನೀನಾ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಗೋಕರ್ಣದ ರಾಮತೀರ್ಥ ಬೆಟ್ಟದ ಮೇಲಿರುವ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿತು. ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ, 40 ವರ್ಷದ ಆಕೆ ಆಧ್ಯಾತ್ಮಿಕ ಏಕಾಂತತೆಯನ್ನು ಅರಸುತ್ತಾ ಗೋವಾದಿಂದ ಗೋಕರ್ಣಕ್ಕೆ ಪ್ರಯಾಣಿಸಿದ್ದಾಗಿ ಹೇಳಿದ್ದಳು. ನಗರ ಜೀವನದ ಗೊಂದಲಗಳಿಂದ ದೂರವಿರಲು, ಧ್ಯಾನ ಮತ್ತು ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳಲು ಗುಹೆಯಲ್ಲಿ ವಾಸಿಸಲು ನಿರ್ಧರಿಸಿದ್ದಾಗಿ ಆಕೆ ಹೇಳಿಕೊಂಡಿದ್ದಳು..
ಏಪ್ರಿಲ್ 2017 ರಲ್ಲೇ ಇವರ ವೀಸಾ ಅವಧಿ ಮುಗಿದಿದ್ದು, ಬ್ಯುಸಿನೆಸ್ ವೀಸಾದಲ್ಲಿ ಅವರು ಭಾರತಕ್ಕೆ ಬಂದಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. 2018 ರ ಏಪ್ರಿಲ್ ವೇಳೆ ಗೋವಾದ ಪಣಜಿಯಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಇವರಿಗೆ ನಿರ್ಗಮನ ಪರವಾನಗಿಯನ್ನು ನೀಡಿತ್ತು ಮತ್ತು ಅವರ ಬಳಿ ಇರುವ ದಾಖಲೆಗಳ ಪ್ರಕಾರ ಅವರು ನಂತರ ನೇಪಾಳಕ್ಕೆ ನಿರ್ಗಮಿಸಿ ಸೆಪ್ಟೆಂಬರ್ 2018 ರಲ್ಲಿ ಭಾರತಕ್ಕೆ ಮತ್ತೆ ಪ್ರವೇಶಿಸಿದ್ದಾರೆ ಎಂದು ತೋರಿಸಿದೆ, ಇದರಿಂದಾಗಿ ಅವರಿಗೆ ಅನುಮತಿ ನೀಡಿದ್ದ ಅವಧಿ ಮೀರಿದ್ದು, ಅವರು ಅಕ್ರಮವಾಗಿ ನೆಲೆಸಿದ್ದಾರೆ.