ಬೆಂಗಳೂರಿನಲ್ಲಿ ಹೆಚ್ಚಿದ ಆತ್ಮಹತ್ಯೆ ಯತ್ನ; ಯುವ ಪುರುಷರಲ್ಲಿ ಹೆಚ್ಚು ಎಂದು ನಿಮ್ಹಾನ್ಸ್ ಅಧ್ಯಯನ ವರದಿ

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸುವವರ ಪೈಕಿ 25 ರಿಂದ 39 ವರ್ಷ ವಯಸ್ಸಿನವರೇ ಹೆಚ್ಚಿದ್ದು, ಅದರಲ್ಲಿಯೂ ಗಂಡುಮಕ್ಕಳೇ ಅಧಿಕ ಇರುವುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನಿಮ್ಹಾನ್ಸ್ನ (NIMHANS) ಎನ್-ಸ್ಟ್ರೈಟ್ ಕೇಂದ್ರ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರಿನಲ್ಲೇಆತ್ಮಹತ್ಯೆ ಯತ್ನ ಹೆಚ್ಚಾಗಿರುವುದೂ ಕಂಡುಬಂದಿದೆ. ಅದೇ ರೀತಿ, ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿ ನಿಮ್ಹಾನ್ಸ್ನ ‘ಉಷಾಸ್ (ನಗರ ಪ್ರದೇಶದಲ್ಲಿನ ಸ್ವಯಂ ಹಾನಿ ಅಧ್ಯಯನ)’ (USHAS) ಯೋಜನೆಯಡಿ ನೋಂದಣಿ ಮಾಡಿಕೊಂಡವರು ಮತ್ತೆ ಆತ್ಮಹತ್ಯೆಗೆ ಯತ್ನಸುವುದು ತೀರಾ ವಿರಳ ಎಂದು ಅಧ್ಯಯನ ವರದಿ ತಿಳಿಸಿದೆ. ಆತ್ಮಹತ್ಯೆ ಮರುಪ್ರಯತ್ನ ಪ್ರಮಾಣ ಶೇ 1.19 ರಷ್ಟಿದೆಯಷ್ಟೆ ಎಂದು ವರದಿ ತಿಳಿಸಿದೆ.

ವಿಶ್ವ ಆತ್ಮಹತ್ಯೆ ತಡೆ ದಿನ ಪ್ರಯುಕ್ತ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಯನ ವರದಿ ಬಿಡುಗಡೆಯಾಗಿದೆ.
ನಿಮ್ಹಾನ್ಸ್ ‘ಉಷಾಸ್’ ಅಧ್ಯಯನ ವರದಿಯಲ್ಲೇನಿದೆ?
‘ಉಷಾಸ್’ ಅಧ್ಯಯನ ಯೋಜನೆಯಡಿ ಈವರೆಗೆ 20,861 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಶೇಕಡಾ 44.37 ರಷ್ಟು ಜನರು 25–39 ವಯಸ್ಸಿನವರು ಮತ್ತು ಶೇಕಡಾ 28.87 ರಷ್ಟು ಜನರು 18–24 ವಯೋಮಾನದವರು. ಪುರುಷರು ಶೇಕಡಾ 55.76 ಆಗಿದ್ದರೆ, ಮಹಿಳೆಯರು ಶೇಕಡಾ 44.15 ಮತ್ತು ಟ್ರಾನ್ಸ್ಜೆಂಡರ್ಗಳು ಶೇಕಡಾ 0.09 ರಷ್ಟಿದ್ದಾರೆ.
ಏನಿದು ‘ಉಷಾಸ್’ ಯೋಜನೆ?
ಆತ್ಮಹತ್ಯೆ ಯತ್ನ ಮಾಡಿದವರಲ್ಲಿ ಆತ್ಮಸ್ಥೈರ್ಯ ತುಂಬಿ ಬೆಂಬಲ ಒದಗಿಸುವುದರ ಜತೆಗೆ, ಮರು ಆತ್ಮಹತ್ಯೆ ಯತ್ನ ಮಾಡದಂತೆ ಅವರನ್ನು ರೂಪಿಸುವ ಉದ್ದೇಶದೊಂದಿಗೆ ನಿಮ್ಹಾನ್ಸ್ 2022 ರಲ್ಲಿ ಆರಂಭಿಸಿರುವ ಯೋಜನೆಯೇ ‘ಉಷಾಸ್ (ನಗರ ಪ್ರದೇಶದಲ್ಲಿನ ಸ್ವಯಂ ಹಾನಿ ಅಧ್ಯಯನ)’. ಬೆಂಗಳೂರಿನ ವಿಕ್ಟೋರಿಯಾ, ಕೆಸಿ ಜನರಲ್ ಮತ್ತು ಬೌರಿಂಗ್ ಮತ್ತು ಲೇಡಿ ಕರ್ಜನ್ ಸೇರಿದಂತೆ 16 ಆಸ್ಪತ್ರೆಗಳಲ್ಲಿ ಯೋಜನೆ ಆರಂಭಿಸಲಾಗಿದೆ. ಆತ್ಮಹತ್ಯೆ ಸಂಬಂಧ ಅಧ್ಯಯನವನ್ನೂ ಈ ಯೋಜನೆ ಅಡಿ ನಡೆಸಲಾಗುತ್ತಿದೆ.
ಬೆಂಗಳೂರಿನಲ್ಲೇ ಹೆಚ್ಚು ಆತ್ಮಹತ್ಯೆ
ಆತ್ಮಹತ್ಯೆ ಪ್ರಕರಣಗಳಲ್ಲಿ ಭಾರತದ ಮಹಾನಗರಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳಿಂದ ತಿಳಿದುಬಂದಿದೆ. ಇದರ ಪ್ರಕಾರ, ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣ ಶೇ 20.2 ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ 12.4 ಕ್ಕಿಂತ ಹೆಚ್ಚಿನದ್ದಾಗಿದೆ.
ರಾಜ್ಯದಲ್ಲಿ ವಾರ್ಷಿಕವಾಗಿ 13,606 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಆತ್ಮಹತ್ಯೆ ಪ್ರಕರಣಗಳ ಪೈಕಿ ಭಾರತದ ಮೆಗಾಸಿಟಿಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
