ರಿಂಕು ಸಿಂಗ್‌ಗೆ ದಾವೂದ್ ಗ್ಯಾಂಗ್‌ನಿಂದ ₹5 ಕೋಟಿ ಸುಲಿಗೆ ಬೆದರಿಕೆ; ಇಬ್ಬರು ಸಹಚರರ ಬಂಧನ

ಟೀಂ ಇಂಡಿಯಾದ ಸ್ಟಾರ್ ಆಟಗಾರ ರಿಂಕು ಸಿಂಗ್‌ಗೆ (Rinku Singh) ಭೂಗತ ಲೋಕದಿಂದ ಬೆದರಿಕೆ ಕರೆಗಳು ಬಂದಿವೆ ಎಂದು ವರದಿಯಾಗಿದೆ. ಮಾಹಿತಿಯ ಪ್ರಕಾರ, ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಗ್ಯಾಂಗ್ ಸದಸ್ಯರಿಂದ ರಿಂಕು ಸಿಂಗ್‌ಗೆ ಬೆದರಿಕೆ ಹಾಕಲಾಗಿದೆ. ಈ ವರ್ಷದ ಫೆಬ್ರವರಿ ಮತ್ತು ಏಪ್ರಿಲ್ ನಡುವೆ ದಾವೂದು ಸಹಚರರು, ರಿಂಕು ಸಿಂಗ್‌ಗೆ ಮೂರು ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ. ಡಿ-ಕಂಪನಿಯಿಂದ ಬಂದ ಈ ಬೆದರಿಕೆಯ ಸಂದೇಶದಲ್ಲಿ ರಿಂಕು ಸಿಂಗ್ ಅವರಿಂದ 5 ಕೋಟಿ ರೂ. ಸುಲಿಗೆಗೆ ಬೇಡಿಕೆ ಇಟ್ಟಿವೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ದಾವೂದ್ ಸಹಚರರನ್ನು ಬಂಧಿಸಿದ್ದಾರೆ.

5 ಕೋಟಿ ರೂ.ಗೆ ಬೇಡಿಕೆ
ಐಪಿಎಲ್ನಲ್ಲಿ ಬೆಳಕಿಗೆ ಬಂದ ರಿಂಕು ಸಿಂಗ್, ಒಂದೇ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದರು. ಆ ಬಳಿಕ ಟೀಂ ಇಂಡಿಯಾಕ್ಕೂ ಆಯ್ಕೆಯಾದರು. ಇದರಿಂದ ಅವರ ಐಪಿಎಲ್ ಸಂಬಳವೂ ಹೆಚ್ಚಾಗಿತ್ತು. ಇದರಿಂದಾಗಿ ರಿಂಕು ಸಿಂಗ್ ತಮ್ಮ ತವರಿನಲ್ಲಿ ಬಡ ಕ್ರಿಕೆಟಿಗರಿಗಾಗಿ ಅಕಾಡೆಮಿಯನ್ನು ತೆರೆದಿದ್ದರು. ಇದೀಗ ರಿಂಕು ಸಿಂಗ್‌ಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದಕ್ಕಾಗಿ ಪೊಲೀಸರು ಬಂಧಿಸಿದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಬೆದರಿಕೆ ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ನಂಟು
5 ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳಾದ ಮೊಹಮ್ಮದ್ ದಿಲ್ಶಾದ್ ಮತ್ತು ಮೊಹಮ್ಮದ್ ನವೀದ್ ಅವರನ್ನು ವೆಸ್ಟ್ ಇಂಡೀಸ್‌ನಲ್ಲಿ ಬಂಧಿಸಲಾಗಿದೆ. ಅಲ್ಲದೆ ವೆಸ್ಟ್ ಇಂಡೀಸ್ ಸರ್ಕಾರ ಈ ಇಬ್ಬರನ್ನು ಆಗಸ್ಟ್ 1 ರಂದು ಭಾರತಕ್ಕೆ ಹಸ್ತಾಂತರಿಸಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಮಾಜಿ ಶಾಸಕ ಬಾಬಾ ಸಿದ್ದಿಕಿ ಅವರ ಹತ್ಯೆಯ ನಂತರ ಅವರ ಮಗ ಜೀಶನ್ ಸಿದ್ದಿಕಿ ಅವರಿಂದ 10 ಕೋಟಿ ರೂಪಾಯಿಗಳ ಸುಲಿಗೆ ಬೇಡಿಕೆ ಇಟ್ಟಿದ್ದಕ್ಕಾಗಿ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಾದ ನಂತರ, ಆರೋಪಿಗಳಲ್ಲಿ ಒಬ್ಬನು ರಿಂಕು ಸಿಂಗ್ ಅವರಿಗೆ ಕರೆ ಮಾಡಿ ಅವರಿಂದ ಸುಲಿಗೆ ಬೇಡಿಕೆ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ.
ಏಪ್ರಿಲ್ 19 ಮತ್ತು 21 ರ ನಡುವೆ ಜೀಶನ್ ಸಿದ್ದಿಕಿಗೆ ಹಣ ನೀಡುವಂತೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾಗಿತ್ತು ಎಂದು ಮುಂಬೈ ಪೊಲೀಸ್ ಅಪರಾಧ ವಿಭಾಗ ವರದಿ ಮಾಡಿದೆ. ಹಾಗೆಯೇ ರಿಂಕು ಸಿಂಗ್‌ಗೆ ಫೆಬ್ರವರಿ ಮತ್ತು ಏಪ್ರಿಲ್ ನಡುವೆ ಮೂರು ಬೆದರಿಕೆಯ ಮೇಲ್ಗಳನ್ನು ಕಳುಹಿಸಲಾಗಿತ್ತು ಎಂದು ವರದಿಯಾಗಿದೆ.