ಭಾರತದಲ್ಲಿ ಎಟಿಎಂ ನಲ್ಲಿ ಸಿಗಲಿದೆ ಅಕ್ಕಿ: ಪಡಿತರ ವಿತರಣೆಯಲ್ಲಿ ನೂತನ ಕ್ರಾಂತಿ

ಒಡಿಶಾ :ಎಟಿಎಂನಲ್ಲಿ ದುಡ್ಡು ಬರುವುದು ಮಾಮೂಲಿ. ಆದರೆ ದೇಶದಲ್ಲಿ ಮಹತ್ವದ ಬದಲಾವಣೆಯೊಂದರಲ್ಲಿ ಎಟಿಎಂನಲ್ಲಿ ಅಕ್ಕಿ ಬರುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಾಯೋಗಿಕವಾಗಿ ದೇಶದ ಒಂದು ರಾಜ್ಯದಲ್ಲಿ ಇದು ಅಭಿವೃದ್ಧಿಯಾಗಿದ್ದು. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಈ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ.
ಎಟಿಎಂ ಪರಿಕಲ್ಪನೆ ದೇಶಕ್ಕೆ ಬಂದು ಸಾಕಷ್ಟು ವರ್ಷಗಳಾಗಿವೆ. ಎಟಿಎಂನ ನಂತರ ಇದೀಗ ಆನ್‌ಲೈನ್ ವಹಿವಾಟುಗಳು ಹೆಚ್ಚಾಗಿವೆ. ಇಲ್ಲಿಯ ವರೆಗೆ ಹಣ ತೆಗೆಯುವುದು ಹಾಗೂ ಹಣ ಜಮೆ ಮಾಡುವುದಕ್ಕೆ ಮಾತ್ರ ಎಟಿಎಂ ಬಳಕೆ ಮಾಡಲಾಗುತ್ತಿತ್ತು. ಇದೀಗ ಅಕ್ಕಿ ವಿತರಣೆಗೂ ಎಟಿಎಂ ಬಂದಿದೆ. ಇದು ಏನು ಹಾಗೂ ಎಟಿಎಂ ರೈಸ್ ಪರಿಕಲ್ಪನೆ ಹೇಗೆ ಕೆಲಸ ಮಾಡುತ್ತದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಹೌದು ಒಡಿಶಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಟಿಎಂ ರೈಸ್ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ. ಒಡಿಶಾ ಆಹಾರ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಸಚಿವ ಕೃಷ್ಣ ಚಂದ್ರಪಾತ್ರ ಅವರು ಒಡಿಶಾದ ಭುವನೇಶ್ವರದಲ್ಲಿ ಭಾರತದ ಮೊದಲ ಅಕ್ಕಿ ಎಟಿಎಂ (Rice Atm) ಉದ್ಘಾಟಿಸಿದ್ದಾರೆ. ಇದು ತೀರ ಹೊಸದಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪಡಿತರ ಚೀಟಿ ಅಕ್ಕಿ ವಿತರಣೆಯಲ್ಲಿ ಹೊಸ ಆವಿಷ್ಕಾರ ನಡೆದಿದೆ. ಇಲ್ಲಿನ ಮಂಚೇಶ್ವರದ ಗೋದಾಮಿನಲ್ಲಿ ಸ್ಥಾಪಿಸಲಾಗಿರುವ ಈ ಯಂತ್ರವು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಕ್ಕಿ ವಿತರಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ವಿನ್ಯಾಸ ಮಾಡಲಾಗಿದೆ.
ಎಟಿಎಂ ರೈಸ್ ಯಂತ್ರದ ವಿನ್ಯಾಸವು ಭಾರತದ ಮಟ್ಟಿಗೆ ಹೊಸದಾಗಿದೆ. ರೈಸ್ ಎಟಿಎಂ ಮೂಲಕ ಪಡಿತರ ಚೀಟಿದಾರರು ಟಚ್‌ಸ್ಕ್ರೀನ್ ಪ್ರದರ್ಶನದ ಮಾದರಿಯಲ್ಲಿ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿದರೆ, 25 ಕೆಜಿ ವರೆಗೆ ಅಕ್ಕಿಯನ್ನು ವಿತರಿಸಲಾಗುತ್ತದೆ. ಇದಾದ ಮೇಲೆ ಬಯೋಮೆಟ್ರಿಕ್ ದೃಢೀಕರಣವನ್ನು ನೀಡಲಾಗುತ್ತದೆ. ಅಕ್ಕಿ ವಿತರಣಾ ಹೊಸ ವ್ಯವಸ್ಥೆಯು ಸಾಂಪ್ರದಾಯಿಕ ವಿತರಣಾ ಕೇಂದ್ರಗಳಲ್ಲಿ ಫಲಾನುಭವಿಗಳು ದೀರ್ಘ ಸರತಿ ಸಾಲಿನಲ್ಲಿ ಕಾಯುವ ಅಗತ್ಯವನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಮತ್ತು ಸಬ್ಸಿಡಿ ಅಕ್ಕಿಯ ಕಳ್ಳತನ ಮತ್ತು ಕಪ್ಪು-ಮಾರುಕಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಟಿಎಂ ರೈಸ್ ವಿತರಣೆಯಿಂದ ಜನ ಸರತಿ ಸಾಲಿನಲ್ಲಿ ಅಕ್ಕಿಗೋಸ್ಕರ ತಾಸುಗಟ್ಟಲೆ ಕಾಯುವುದು ತಪ್ಪಲಿದೆ. ನಾವು ಪಡಿತರ ಚೀಟಿದಾರರಿಗಾಗಿ ರೈಸ್ ಎಟಿಎಂ ಅನ್ನು ಪರೀಕ್ಷಿಸಿದ್ದೇವೆ. ಇದು ಭಾರತದಲ್ಲಿಯೇ ಮೊದಲ ರೈಸ್ ಎಟಿಎಂ ಆಗಿದೆ. ಪ್ರಾಯೋಗಿಕವಾಗಿ ಇದನ್ನು ಉದ್ಘಾಟಿಸಲಾಗಿದೆ. ಯಾವುದೇ ರೀತಿಯ ಮೋಸ ಹಾಗೂ ಜನ ತಾಸುಗಟ್ಟಲೆ ಕಾಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಈ ಯಂತ್ರದ ಮೂಲಕ ಫಲಾನುಭವಿಗಳು ಸರಿಯಾದ ತೂಕದಲ್ಲಿ ಅಕ್ಕಿಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶವಾಗಿದೆ ಎಂದು ಒಡಿಶಾ ಸರ್ಕಾರ ಹೇಳಿದೆ.
ಇನ್ನು ಎಟಿಎಂ ರೈಸ್ ಅನ್ನು ಆರಂಭದಲ್ಲಿ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಪರಿಚಯಿಸಲಾಗುವುದು. ಮುಂದುವರಿದು ಹಂತ ಹಂತವಾಗಿ ಒಡಿಶಾದ ಎಲ್ಲಾ 30 ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲಾಗುವುದು. ಈ ಮಾದರಿ ಈ ರಾಜ್ಯದಲ್ಲಿ ಯಶಸ್ವಿಯಾದರೆ ಮುಂದೆ ಇದನ್ನು ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಡಿ ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ವಿವಿಧ ರಾಜ್ಯಗಳ ಜನರು ತಮ್ಮ ಪಡಿತರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಸಚಿವರು ಹೇಳಿದರು.
