ಪತಿಯರ ದ್ರೋಹಕ್ಕೆ ಪ್ರತೀಕಾರ: ಹುಡುಗಿಯರ ವಿಚಿತ್ರ ನಿರ್ಧಾರ ಮದುವೆಯಾಗಿ ವೈರಲ್

ಉತ್ತರಪ್ರದೇಶ : ನಮಗೆ ಪುರುಷರ ಅಗತ್ಯವಿಲ್ಲವೆಂದು ಇಬ್ಬರು ಸ್ನೇಹಿತೆಯರು ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಬದೌನ್‌ನಲ್ಲಿ ನಡೆದಿದೆ. ಹೌದು, ತಮ್ಮ ಗಂಡಂದಿರಿಂದ ದ್ರೋಹವಾದಾಗ ಇವರು ಪರಸ್ಪರ ವಿವಾಹವಾಗಲು ನಿರ್ಧರಿಸಿದರು. ಶಿವ ದೇವಾಲಯಕ್ಕೆ ಹೋಗಿ ಪರಸ್ಪರ ಪುಷ್ಪಮಾಲೆ ಧರಿಸಿ ಸಪ್ತಪದಿ ತುಳಿದು ಒಟ್ಟಿಗೆ ಬದುಕಲು ಪ್ರತಿಜ್ಞೆ ಮಾಡಿದರು. ಈ ಇಬ್ಬರೂ ತಮ್ಮ ಜೀವನದುದ್ದಕ್ಕೂ ಗಂಡ ಹೆಂಡತಿಯಂತೆ ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡು ಬದುಕಲು ನಿರ್ಧರಿಸಿದ್ದಾರಂತೆ.

ಈಗ ಮದುವೆಯಾಗಿರುವ ಒಬ್ಬ ಹುಡುಗಿ ಅಲಪರ್ ಪೊಲೀಸ್ ಠಾಣೆ ಪ್ರದೇಶದವಳು. ಆಕೆಯ ಸ್ನೇಹಿತೆ ಸಿವಿಲ್ ಲೈನ್ಸ್ ಕೊಟ್ಬಾಲಿ ಪ್ರದೇಶದ ನಿವಾಸಿ. ಗಂಡಂದಿರಿಂದ ಮೋಸ ಹೋದ ನಂತರ ಇವರ ಸಂಬಂಧವು ಮುರಿದುಹೋಯಿತು. ಇದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇವರಿಬ್ಬರು ಸುಮಾರು ಮೂರು ತಿಂಗಳ ಹಿಂದೆ ನ್ಯಾಯಾಲಯದ ಆವರಣವೊಂದರ ವಕೀಲರ ಕೊಠಡಿಯಲ್ಲಿ ಭೇಟಿಯಾಗಿದ್ದರು. ಭೇಟಿಯ ನಂತರ ಇಬ್ಬರ ನಡುವೆ ಮಾತುಕತೆಯಾಗಿತ್ತು. ಇದು ಶೀಘ್ರದಲ್ಲೇ ಆಳ ಸ್ನೇಹಕ್ಕೆ ತಿರುಗಿತ್ತು. ಬಳಿಕ ಈ ಸ್ನೇಹವೇ ಮದುವೆಯ ರೂಪ ಪಡೆದುಕೊಂಡಿತು.
ತಮ್ಮ ಗಂಡಂದಿರ ವರ್ತನೆಯಿಂದ ನೊಂದುಕೊಂಡಿದ್ದ ಇಬ್ಬರು ಪರಸ್ಪರ ಜೀವನ ಸಂಗಾತಿಗಳಾಗಲು ನಿರ್ಧರಿಸಿದರು. ಮದುವೆಯ ನಂತರ ಸೋನು (ಕಾಲ್ಪನಿಕ ಹೆಸರು) ಪತಿಯಾದರೆ, ರೀಟಾ (ಕಾಲ್ಪನಿಕ ಹೆಸರು) ಹೆಂಡತಿಯಾಗಿದ್ದಾಳೆ. ಸೋನು ಈ ಹಿಂದೆ ಪಶ್ಚಿಮ ದೆಹಲಿಯಲ್ಲಿ ಶಿಶುಪಾಲನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ರೀಟಾ ಡೆಹ್ರಾಡೂನ್ನ ಭದ್ರತಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಸ್ತುತ ಇಬ್ಬರೂ ಬದೌನ್‌ನಲ್ಲಿದ್ದು, ಮದುವೆ ನಂತರ ಭವಿಷ್ಯದ ಜವಾಬ್ದಾರಿಗಳನ್ನ ನಿರ್ವಹಿಸಲು ಸಜ್ಜಾಗಿದ್ದಾರೆ. ಇಬ್ಬರೂ ತಮ್ಮ ನಿರ್ಧಾರದ ಬಗ್ಗೆ ತಮ್ಮ ಕುಟುಂಬಗಳಿಗೆ ತಿಳಿಸಿದ್ದಾರಂತೆ. ಒಂದು ವೇಳೆ ಕುಟುಂಬಸ್ಥರು ತಮಗೆ ಬೆಂಬಲ ನೀಡಿದ್ರೆ ಉತ್ತಮ ಜೀವನ ನಡೆಸುವುದಾಗಿ ತಿಳಿಸಿದ್ದಾರೆ.
ಈ ವಿಚಿತ್ರ ವಿವಾಹದ ಸುದ್ದಿ ನ್ಯಾಯಾಲಯದ ಆವರಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅನೇಕರು ಇವರ ಈ ನಡೆಗೆ ಆಘಾತ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಧೈರ್ಯಶಾಲಿ ನಿರ್ಧಾರವೆಂದು ಕರೆದಿದ್ದಾರೆ. ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಸುತ್ತಿದ್ದಾರೆ. ಈ ಬಗ್ಗೆ ವಕೀಲ ದಿವಾಕರ್ ವರ್ಮಾ ಮಾತನಾಡಿ, ʼಹುಡುಗಿಯರು ತಮ್ಮ ಕೊಠಡಿಗೆ ಬಂದು ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದರು. ಈ ಬಗ್ಗೆ ಕಾನೂನು ಒಪ್ಪಿಗೆಗಾಗಿ ಒಪ್ಪಂದ ಪತ್ರವನ್ನ ಸಿದ್ಧಪಡಿಸಲಾಯಿತು. ಇದಕ್ಕೆ ಇಬ್ಬರೂ ಸಹಿ ಹಾಕಿದರು. ನಂತರ ಶಿವ ದೇವಾಲಯದಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ಇವರ ವಿವಾಹ ವಿಧಿ-ವಿಧಾನಗಳು ಪೂರ್ಣಗೊಂಡವು. ಇದೀಗ ಈ ಇಬ್ಬರೂ ನಗುನಗುತ್ತಾ ಜೀವನ ನಡೆಸಬೇಕೆಂದು ನಿರ್ಧರಿಸಿದ್ದಾರೆ.
