ನಿವೃತ್ತ ಪೊಲೀಸ್ ಅಧಿಕಾರಿಯ ಪೋಸ್ಟ್ ವೈರಲ್: ‘ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತವಾಗಿರುವ ಪೊಲೀಸ್ ಅಧಿಕಾರಿಯೊಬ್ಬರ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗುತ್ತಿದೆ. ಜನ ಸಾಮಾನ್ಯರು ಇವರೇ ನಿಜವಾದ ಪೊಲೀಸ್ ಅಧಿಕಾರಿ ಅಂತಾ ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಪೊಲೀಸರ ಬಗ್ಗೆ ಅಷ್ಟು ಬೇಗ ಒಳ್ಳೆಯ ಮಾತುಗಳು ಕೇಳಿ ಬರುವುದು ಕಡಿಮೆ.

ಇದೀಗ ಈ ಪೊಲೀಸ್ ಅಧಿಕಾರಿಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಪೊಲೀಸ್ ಅಧಿಕಾರಿಯ ಪೋಸ್ಟ್ ಸಹ ವೈರಲ್ ಆಗಿದೆ.
ಮೈಸೂರು ಗ್ರಾಮಾಂತರ ಉಪ ವಿಭಾಗದ ಡಿಎಸ್‌ಪಿಯಾಗಿ ಸೇವೆಯಿಂದ ನಿವೃತ್ತಿ ಹೊಂದಿರುವ ಎ.ಕರೀಮ್ ರಾವ್‌ತರ್(Karim Rowther) ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಕರ್ತವ್ಯಕ್ಕೆ ಸೇರಿ 32 ವರ್ಷ ಸೇವೆ ಸಲ್ಲಿಸಿದೆ. ಒಮ್ಮೆಯೂ 100 ರೂಪಾಯಿ ರಿವಾರ್ಡ್ ಪಡೆದು ಕೊಂಡಿಲ್ಲ. ಪದಕಗಳಿಗೆ ಅರ್ಜಿಯನ್ನು ಹಾಕಿಲ್ಲ. ಯಾರೂ ರಿವಾರ್ಡನ್ನು ಕೊಡಲೂ ಇಲ್ಲ. ನನ್ನ ಸೇವಾ ಪುಸ್ತಕದಲ್ಲಿ ಯಾವುದೇ ಬಹುಮಾನ, ಪದಕ, ಪಾರಿತೋಷಕದ ಯಾವುದೇ ಎಂಟ್ರಿ ಇಲ್ಲದೇ ಹಾಗೇ ಖಾಲಿ ಖಾಲಿ ಇದೆ ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮುಂದುವರಿದು ಏಕೆ ನೀನು ಬಹುಮಾನಕ್ಕೆ ಅರ್ಜಿ ಹಾಕೋದಿಲ್ಲ ಎಂದು ಒಮ್ಮೆ ನನಗೆ ಹೆಚ್ಚು ಆತ್ಮೀಯರಾಗಿದ್ದ ಡಿಎಸ್‌ಪಿ ಸಾಹೇಬರಾಗಿದ್ದ ರಾಜಶೇಖರ್ ಎಂಬ ಅಧಿಕಾರಿ ಪ್ರಶ್ನಿಸಿದ್ದರು. ಸಾರ್ ನಾನು ಪೊಲೀಸ್ ಇಲಾಖೆಯಲ್ಲಿ ಸಿಂಹ, ಹುಲಿ, ಕರಡಿ ತರಹ ಏನೂ ಡ್ಯೂಟಿ ಮಾಡ್ತಾ ಇಲ್ಲ. ಸಿಂಪಲ್ ಆಗಿ ಡ್ಯೂಟಿ ಮಾಡ್ತಿದ್ದೀನಿ. ಇನ್ನು ಕಳ್ಳತನ ಕೊಲೆ ಇತ್ಯಾದಿ ಅಪರಾಧಗಳನ್ನು ಪತ್ತೆ ಹಿಡಿಯುವುದಕ್ಕೇ ನನಗೆ ಇಲಾಖೆ ಸಂಬಳ ಕೊಡ್ತಾ ಇರೋದು, ಇನ್ನು ಬಹುಮಾನ ತಗೊಳಕ್ಕೆ ಮಾಡ್ತಾ ಇರೋ ಮಹಾ ಕೆಲಸವಾದರೂ ಏನೂ ಎಂದು ಕೇಳಿದ್ದೆ. ನನ್ನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಸಾಹೇಬರು ಸಾಮಾಧಾನದಿಂದ ನನ್ನ ಹೆಸರು ಕರೆದು, ನೀನು ಸ್ವಲ್ಪ ಲೂಸ್ ಇದ್ದೀಯಾ ಎಂದು ಹೇಳಿ ನಕ್ಕಿದ್ದರು ಎಂದು ಹಳೆಯ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.
ಅದು ಈಗ ನೆನಪಾಯಿತು. ಮೊನ್ನೆಯಾಗಿ ಮೈಸೂರು ಗ್ರಾಮಾಂತರ ಉಪ ವಿಭಾಗದ ಡಿಎಸ್ ಪಿಯಾಗಿ ನಾನು ಸೇವೆಯಿಂದ ನಿವೃತ್ತಿ ಹೊಂದಿದೆ. ಕರ್ತವ್ಯದ ಮಧ್ಯೆ ಪರಿಚಿತರಾದ ಹಿತೈಷಿಗಳು ಬಂದು ಶುಭ ಕೋರಿದ್ದರು. ಅವರು ನೀಡಿದ್ದ ಹಾರ ತುರಾಯಿಗಳನ್ನು ಮನೆಗೆ ತಂದಿದ್ದೆ, ಎಲ್ಲವನ್ನು ಒಟ್ಟುಗೂಡಿಸಿ ನೋಡಿದಾಗ ಎಲ್ಲಾ ಬಹುಮಾನ, ಮತ್ತು ಮೆಡಲುಗಳನ್ನು ನಾಡಿನ ಜನತೆ ಒಟ್ಟಿಗೆ ತಂದು ಕೊಟ್ಟರೋ ಎಂದು ಅನಿಸಿಬಿಡ್ತು. ಮನಸ್ಸು ಕೂಗಿ ಕೂಗಿ ಮತ್ತೊಮ್ಮೆ ಅವರಿಗೆ ಧನ್ಯವಾದಗಳನ್ನು ಹೇಳು ಎಂದು ತಿವಿದು ತಿವಿದು ನನಗೆ ಹೇಳುತ್ತಿತ್ತು. ಪ್ರೀತಿ ವಾತ್ಸಲ್ಯದಿಂದ ನನ್ನನ್ನು ಅಬಿನಂಧಿಸಿ ಶುಭ ಹಾರೈಸಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಇವು ನನ್ನ ಸೇವೆಗೆ ನೀವು ನೀಡಿದ ನೆನೆಪಿನ ಕಾಣಿಕೆಗಳು, ಪ್ರಮಾಣ ಪತ್ರಗಳು. ನನ್ನ ಬಗ್ಗೆ ನಾನೇ ಅಭಿಮಾನಪಟ್ಟು ಕೊಳ್ಳಬಹುದಾದ ಕ್ಷಣಗಳು ಸರ್ ಇದು. ಧನ್ಯವಾದಗಳು. ನನ್ನ ಮೇಲೆ ನಿಮ್ಮಲ್ಲರ ಹಾರೈಕೆ, ಪ್ರಾರ್ಥನೆಗಳು ಹೀಗೆ ಸದಾ ಇರಲಿ ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.