ಗೃಹ ಸಚಿವರ ನಿವಾಸದ ಸಮೀಪವೇ ನಿವೃತ್ತ ಪೊಲೀಸ್ ಅಧಿಕಾರಿ ಡಬಲ್ ಬ್ಯಾರೆಲ್ ಗನ್ ಹಿಡಿದು ರಂಪಾಟ!

ಬೆಂಗಳೂರು: ನಗರದ ಸದಾಶಿವನಗರದಲ್ಲಿ ನಡೆದ ಬೆಳಗಿನ ಜಾವದಲ್ಲಿ ನಡೆದ ಘಟನೆಯೊಂದು ಭಾರೀ ಸದ್ದು ಮಾಡುತ್ತಿದೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಡಬಲ್ ಬ್ಯಾರೆಲ್ ಗನ್ ಹಿಡಿದು ಕಾರ್ಮಿಕರಿಗೆ ಬೆದರಿಕೆ ಹಾಕಿ ರಂಪಾಟ ಮಾಡಿದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇದು ಬೆಂಗಳೂರಿನ ಗೃಹ ಸಚಿವರ ನಿವಾಸದ ಬಳಿಯೇ ನಡೆದಿದೆ ಎನ್ನುವುದು ಇನ್ನಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಘಟನೆ ವಿವರ:
ಸದಾಶಿವನಗರದ ನಿತೇಶ್ ಅಪಾರ್ಟ್ಮೆಂಟ್ ಬಳಿ ನೂರಾರು ಗ್ರಾನೈಟ್ ಟೈಲ್ಸ್‌ಗಳನ್ನು ತುಂಬಿದ್ದ ಕಂಟೈನರ್ ಲಾರಿ ನಿಧಾನವಾಗಿ ಸಾಗುತ್ತಿತ್ತು. ಈ ವೇಳೆ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಲಾರಿಯು ಗ್ರಾನೈಟ್‌ಗಳನ್ನು ಡಿಲಿವರ್ ಮಾಡಲು ಬಂದು ಮನೆಯ ಮುಂದೆ ನಿಂತಿತ್ತು. ಇದೇ ವೇಳೆ, ಆ ನಿವಾಸದೊಳಗಿಂದ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಎಂಬವರು ಏಕಾಏಕಿ ಡಬಲ್ ಬ್ಯಾರೆಲ್ ಗನ್ ಹಿಡಿದು ಹೊರಬಂದರು. ಲಾರಿ ಚಾಲಕನಿಗೆ ಗನ್ ತೋರಿಸಿ, ‘ಇಲ್ಲಿ ಏಕೆ ಬಂದೆ ಮಗನೇ? ಫುಲ್ ಅವಾಜ್ ಹಾಕುತ್ತಾ ಏನು ಈ ಕಡೆ?’ ಎಂದು ಧಮ್ಕಿ ಹಾಕಿದರು.

ಆಗ ಕಾರ್ಮಿಕರು ‘ಸರ್, ಅಲ್ಲಿ ವರ್ಕ್ ನಡೆಯುತ್ತಿದೆ. ಗ್ರಾನೈಟ್ ಅನ್‌ಲೋಡ್ ಮಾಡಬೇಕು ಸರ್, ಎಂದು ಶಾಂತಧ್ವನಿಯಲ್ಲಿ ಉತ್ತರಿಸಿದರೂ, ಅವರು ಕೇಳಲೇ ಇಲ್ಲ. ಇಲ್ಲಿ ಕಾರ್ಮಿಕರಿಗಷ್ಟೇ ಅಲ್ಲದೆ, ಅವರನ್ನು ಬಿಡಿಸಲು ಬಂದ ತಮ್ಮ ಕುಟುಂಬಸ್ಥರ ಮೇಲೆಯೂ ಜಯಪ್ರಕಾಶ್ ರಂಪಾಟ ನಡೆಸಿದರು. ಜತೆಗೆ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರತ್ತ ಗನ್ ತೋರಿಸಿ ಬೆದರಿಕೆ ಹಾಕಿದ ದೃಶ್ಯವನ್ನು ಸ್ಥಳೀಯರು ಕಣ್ಣಾರೆ ನೋಡಿದ್ದು, ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಶೂಟ್ ಕೂಡ ಮಾಡಿದ್ದಾರೆ.
ದಾರಿಹೋಕರು ತಬ್ಬಿಬ್ಬಾದರು:
ಇನ್ನು ಬೆಂಗಳೂರಿನಲ್ಲಿ ಹಾಡಹಗಲೇ ಸಾರ್ವಜನಿಕವಾಗಿ ಡಬಲ್ ಬ್ಯಾರಲ್ ಗನ್ ಹಿಡಿದು ರಂಪಾಟವನ್ನು ಕಂಡು ದಾರಿಹೋಗುತ್ತಿದ್ದ ಸಾರ್ವಜನಿಕರು ತಬ್ಬಿಬ್ಬಾದರು. ಯಾರಾದರೂ ಅಪಾಯಕ್ಕೆ ಒಳಗಾಗಬಹುದು ಎಂಬ ಭೀತಿಯಿಂದ ಜನ ಕೆಲ ಕಾಲ ರಸ್ತೆಯ ಬದಿಯಲ್ಲಿ ಸಂಚಾರ ಮಾಡುವುದನ್ನೇ ನಿಲ್ಲಿಸಿದ್ದರು. ಇನ್ನು ಸರ್ಕಾರದ ರಕ್ಷಣಾ ವಿಭಾಗದ ನಿವೃತ್ತ ಅಧಿಕಾರಿಯೊಬ್ಬರು ಕಾನೂನು ಕೈಗೆ ತೆಗೆದುಕೊಂಡ ವರ್ತನೆಗೆ ಕಟ್ಟುನಿಟ್ಟಿನ ಕ್ರಮ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
