ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮುಂದೂಡಲು ಮನವಿ: ಕಾರಣವೇನು?

ಕರ್ನಾಟಕದಲ್ಲಿ ಮುಂದಿನ ವರ್ಷ ಮತದಾರರ ಸಮಗ್ರ ಪಟ್ಟಿ ಪರಿಷ್ಕರಣೆ ನಡೆಯಲಿದೆ ಎಂದು ಇತ್ತೀಚೆಗೆ ಕರ್ನಾಟಕ ಮುಖ್ಯ ಚುನಾವಣಾ ಆಯೋಗ ತಿಳಿಸಿತ್ತು. ಆದರೆ ಸ್ಥಳೀಯಸಂಸ್ಥೆ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ, ರಾಜ್ಯ ಚುನಾವಣಾ ಆಯೋಗದಿಂದ ಪತ್ರ ಬರೆಯಲಾಗಿದೆ.

ಜಿಬಿಎ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆ ನಡೆಯಲಿದ್ದು, ಅದು ಮುಗಿಯುವವರೆಗೆ ರಾಜ್ಯದಲ್ಲಿ ಮತದಾರರ ಸಮಗ್ರ ಪಟ್ಟಿ ಪರಿಷ್ಕರಣೆಯನ್ನು (SIR) ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಚುನಾವಣಾ ಆಯೋಗ (State Election Commission) ಮನವಿ ಮಾಡಿದೆ. ಈ ಕುರಿತಾಗಿ ಪತ್ರ ಬರೆದಿರುವ ರಾಜ್ಯ ಚುನಾವಣಾ ಆಯೋಗ, ಸ್ಥಳೀಯಸಂಸ್ಥೆ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿ ಪರಿಷ್ಕರಣೆ ಮುಂದೂಡುವಂತೆ ತಿಳಿಸಿದೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದ್ದಿಷ್ಟು
ಈ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಮಾತನಾಡಿದ್ದು, ಮಂಗಳವಾರ ಕೇಂದ್ರ ಚುನಾವಣಾ ಮುಖ್ಯ ಆಯುಕ್ತರಿಗೆ ಇ-ಮೇಲ್ ಕಳುಹಿಸಿದ್ದೇನೆ. ಬೆಂಗಳೂರು ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆ ನಡೆಸಬೇಕಿದೆ. ನ.1ರಿಂದ ಜಿಬಿಎ ಚುನಾವಣೆ ಸಂಬಂಧ ಕೆಲಸ ಶುರು ಮಾಡಬೇಕು. ಈ ಸಮಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.
