ಖ್ಯಾತ ನಿರ್ದೇಶಕ ವೇಲು ಪ್ರಭಾಕರನ್ ಇನ್ನಿಲ್ಲ: 60ನೇ ವಯಸ್ಸಿನಲ್ಲಿ ಮದುವೆಯಾಗಿ ಸಂಚಲನ ಮೂಡಿಸಿದ್ದ ತಮಿಳು ನಿರ್ದೇಶಕನಿಗೆ ವಿದಾಯ!

ತಮ್ಮ 60ನೇ ವಯಸ್ಸಿನಲ್ಲಿ ತಮಗಿಂತ ಕಿರಿಯ ನತಿಯೊಂದಿಗೆ ವಿವಾಹವಾಗಿ ಭಾರೀ ಸಂಚಲನವನ್ನೇ ಸೃಷ್ಟಿಸಿದ್ದ ಖ್ಯಾತ ತಮಿಳು ನಿರ್ದೇಶಕ ವೇಲು ಪ್ರಭಾಕರನ್ ತೀವ್ರ ಅನಾರೋಗ್ಯದಿಂದಾಗಿ ಇಹಲೋಕ ತ್ಯಜಿಸಿದ್ದಾರೆ.

ಅನಾರೋಗ್ಯದಿಂದ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ನಿರ್ದೇಶಕ ವೇಲು ಪ್ರಭಾಕರನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ವೇಲು ಪ್ರಭಾಕರನ್ ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದು, ಇದು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.
1980 ರಲ್ಲಿ ‘ದೇ ಆರ್ ಡಿಫರೆಂಟ್’ ಚಿತ್ರದ ಮೂಲಕ ವೇಲು ಪ್ರಭಾಕರ್ ಛಾಯಾಗ್ರಾಹಕರಾಗಿ ಸಿನಿಮಾಗೆ ಪದಾರ್ಪಣೆ ಮಾಡಿದರು. ನಂತರ 1989 ರಲ್ಲಿ ‘ನಲೈಯ ಮನಿಥನ್’ ಚಿತ್ರದ ಮೂಲಕ ವೇಲು ಪ್ರಭಾಕರನ್ ಮೊದಲ ಬಾರಿಗೆ ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳಿದರು.
ಅರುಣ್ ಪಾಂಡಿಯನ್ ಜೊತೆ ಕಡವುಲ್, ನೆಪೋಲಿಯನ್ ಜೊತೆ ಶಿವನ್, ಮತ್ತು ಸತ್ಯರಾಜ್ ಜೊತೆ ಪ್ರತಿಚಿಕ್ಕಾರನ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ ವೇಲು ಪ್ರಭಾಕರನ್ ಹಿಟ್ ನಿರ್ದೇಶಕ ಸಾಲಿಗೆ ಸೇರಿದರು. ನಂತರದಲ್ಲಿ ಪ್ರಭಾಕರ್ ನಿರ್ದೇಶನದಿಂದ ವಿರಾಮ ತೆಗೆದುಕೊಂಡು ನಟನೆಯತ್ತ ಗಮನಹರಿಸಲು ಪ್ರಾರಂಭಿಸಿದರು. ಹೀಗೆ ವೇಲು ಪ್ರಭಾಕರನ್ ಪತಿನಾರು, ಗ್ಯಾಂಗ್ಸ್ ಆಫ್ ಮದ್ರಾಸ್, ಕಡವರ್, ಪಿಜ್ಜಾ 3, ರೈಡ್, ವೆಪನ್ ಮತ್ತು ಕಜಾನ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ವೇಲು ಪ್ರಭಾಕರನ್ ವೈಯಕ್ತಿಕ ಜೀವನ:
ನಿರ್ದೇಶಕ ವೇಲು ಮೊದಲು ಪಿ ಜಯದೇವಿ ಅವರನ್ನು ವಿವಾಹವಾಗಿದ್ದರು. ನಂತರ ವೇಲು ಪ್ರಭಾಕರನ್ 2017ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ನಟಿ ಶೆರ್ಲಿ ದಾಸ್ ಅವರನ್ನು ಎರಡನೇ ವಿವಾಹವಾದರು. ನಟಿ ಶೆರ್ಲಿ ದಾಸ್ ವೇಲು ಪ್ರಭಾಕರನ್ ಅವರೊಂದಿಗೆ ಕಾದಲ್ ಕಾದಲ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 60ನೇ ವಯಸ್ಸಿನಲ್ಲಿ ಕಿರಿಯ ನಟಿಯೊಂದಿಗಿನ ಅವರ ಎರಡನೇ ವಿವಾಹವು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆದರೂ ಗಾಸಿಪ್ಗಳಿಗೆ ಡೊಂಟ್ ಕೇರ್ ಎನ್ನದ ನಿರ್ದೇಶಕ ಋಣಾತ್ಮಕ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಈಗ ತಮಿಳು ಸಿನಿರಂಗದಲ್ಲಿ ಸಾಲು ಸಾಲು ಸಿನಿಮಾ ನಿರ್ದೇಶಿಸಿ ನಟನೆಯಲ್ಲೂ ಸೈ ಎನಿಸಿಕೊಂಡ ಮಹಾನ್ ನಿರ್ದೇಶಕನ್ನು ಕಳೆದುಕೊಂಡಿರುವುದು ಚಲನಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ.
