ಬೇರೆ ಯುವತಿಯೊಂದಿಗಿನ ಸಂಬಂಧ: ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ

ತುಮಕೂರು: ತನ್ನ ಗಂಡ ಬೇರೆ ಯುವತಿಯೊಂದಿಗೆ ಅತಿಯಾದ ಸಲುಗೆ ಇಟ್ಟಿಕೊಂಡಿದ್ದ ಕಾರಣದಿಂದ ಮನನೊಂದು ಮದುವೆಯಾದ ಕೆಲವೇ ತಿಂಗಳಿಗೆ ಪತ್ನಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತುಮಕೂರು (Tumkuru) ಜಿಲ್ಲೆಯ ಶಿರಾ ತಾಲೂಕಿನ (Sira) ಜ್ಯೋತಿನಗರದಲ್ಲಿ ನಡೆದಿದೆ.

ಮದುವೆಯಾಗಿ ನಾಲ್ಕು ತಿಂಗಳಾಗಿತ್ತು
20 ವರ್ಷದ ಪೃಥ್ವಿರಾಣಿ ಎನ್ನುವ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಪೃಥ್ವಿರಾಣಿ ಹಾಗೂ ಜೈಮಾರುತಿ ನಾಯಕ್ ಮದುವೆಯಾಗಿದ್ದರು ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕಾಪಟ್ಟದ ಪೃಥ್ವಿರಾಣಿ ಪಕ್ಕದ ಊರು ಕಿಲಾರ್ಧಹಳ್ಳಿಯ ಜೈಮಾರುತಿ ನಾಯಕ್‌ನನ್ನ ಪ್ರೀತಿಸುತ್ತಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ, ನಾಲ್ಕು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆ ಆಗಿದ್ದರು. ಆದರೆ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡನಿಗೆ ಬೆದರಿಕೆ ಹಾಕುತ್ತಿದ್ದ ಬೇರೆ ಯುವತಿ
ಪೃಥ್ವಿರಾಣಿ ಹಾಗೂ ಜೈಮಾರುತಿ ಮದುವೆಯ ನಂತರ ಶಿರಾ ತಾಲೂಕಿನ ಜ್ಯೋತಿನಗರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು. ಈ ಸಮಯದಲ್ಲಿ ಬೇರೆ ಯುವತಿಯೊಬ್ಬಳು ಮಾರುತಿಗೆ ನನ್ನನ್ನ ಪ್ರೀತಿಸಿ ಈಗ ಬೇರೆ ಹುಡುಗಿ ಜೊತೆ ಮದುವೆಯಾಗಿದ್ದೀಯಾ ಅಂತ ಜಗಳ ಮಾಡುತ್ತಿದ್ದಳು. ಅಲ್ಲದೇ, ಈ ವಿಚಾರದಲ್ಲಿ ಅನೇಕ ಬಾರಿ ಗಲಾಟೆ ಆಗಿದ್ದು, ಆ ಯುವತಿ ಬೆದರಿಕೆ ಸಹ ಹಾಕಿದ್ದಾಳೆ. ಈ ವಿಚಾರವಾಗಿ ರಾಣಿ ತನ್ನ ಗಂಡನನ್ನ ಸಹ ಪ್ರಶ್ನೆ ಮಾಡಿದ್ದಾಳೆ. ಈ ವಿಚಾರವಾಗಿ ದಂಪತಿಯ ಮಧ್ಯ ಸಹ ದೊಡ್ಡ ಜಗಳ ಆಗಿದೆ. ಈ ಸಮಯದಲ್ಲಿ ಪತಿ ಆಕೆಯ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಹಾಗಾಗಿ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಜೈ ಮಾರುತಿಯ ಕುಟುಂಬದವರು ಪೃಥ್ವಿರಾಣಿ ಕುಟುಂಬದವರಿಗೆ ಕರೆ ಮಾಡಿ, ನಿಮ್ಮ ಮಗಳು ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಯಾವಾಗ ತವರು ಮನೆಯಿಂದ ಬಂದು ನೋಡಿದರೋ ಆಗ ಆಕೆ ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆದರೆ ಆಕೆಯ ಕುತ್ತಿಗೆಯಲ್ಲಿ ಕಪ್ಪು ಗುರುತು, ಮೂಗಿನಲ್ಲಿ ರಕ್ತ ಕಾಣಿಸಿಕೊಂಡ ಕಾರಣ ಪೋಷಕರಿಗೆ ಅನುಮಾನ ಬಂದಿದೆ. ಹಾಗಾಗಿ ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ತನಿಖೆ ಮಾಡುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯಕ್ಕೆ ಕಿರುಕುಳದ ಆರೋಪದ ಅಡಿಯಲ್ಲಿ ಪತಿ ಜೈಮಾರುತಿಯನ್ನ ಬಂಧಿಸಿದ್ದು, ವಿಚಾರಣೆ ಆಗುತ್ತಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿ ಪೋಷಕರು ಸಾವಿನ ವಿಚಾರವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆಯ ಕುತ್ತುಗೆ ಮೇಲಿನ ಗುರುತುಗಳ ಬಗ್ಗೆ ತನಿಖೆ ಮಾಡುವಂತೆ ಆಗ್ರಹ ಮಾಡಿದ್ದಾರೆ. ಇದಲ್ಲದೇ, ಜೈಮಾರುತಿಗೆ ಬೆದರಿಕೆ ಹಾಕತ್ತಿದ್ದ ವಿಚಾರವಾಗಿ ಮತ್ತೊಬ್ಬ ಯುವತಿಯನ್ನ ಸಹ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದಾರೆ.